ಬೆಂಗಳೂರು:
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಜಯದೇವ ಹೃದ್ರೋಗ ಸಂಸ್ಥೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ದೇಶದ ಖ್ಯಾತ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಂದು ಕುಮಾರಕೃಪಾ ಹಳೇ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕೆಂಪೇಗೌಡ ಪ್ರಶಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸಮಿತಿ ರಚನೆ ಮಾಡಿದ್ದೆವು. ಅದರಂತೆ ಈ ಬಾರಿ ಒಂದು ಸಂಸ್ಥೆ ಮತ್ತು ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಈ ಬಾರಿ ಜಯದೇವ ಹೃದ್ರೋಗ ಸಂಸ್ಥೆಯನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಬೆಂಗಳೂರಿನ ಯುವಕ ಜಿರೋಧ ಸಂಸ್ಥಾಪಕ ನಿತಿನ್ ಕಾಮತ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳೆಯರಿಗೂ ಪ್ರಶಸ್ತಿ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಕ್ರೀಡಾಪಟು ಅದಿತಿ ಅಶೋಕ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ. ಜೂನ್ 27 ರಂದು ನಡೆಯಲಿರುವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.

ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕುದುರೆ ಮೇಲೆ ಕುಳಿತಿರುವ ಕೆಂಪೇಗೌಡರ ಪ್ರತಿಮೆಯನ್ನು ಒಳಗೊಂಡಿದೆ.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್ ಅವರಿಂದ ಕಸಗುಡಿಸುವ ಕೆಲಸಗಾರರವರೆಗೂ ಎಲ್ಲರೂ ಸೇವೆ ಸಲ್ಲಿಸಿದ್ದು, ಹೀಗಾಗಿ ಈ ಸಂಸ್ಥೆಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ. 1600 ಬೆಡ್ ಸೌಲಭ್ಯ ಹೊಂದಿರುವ ಆಸ್ಪತ್ರೆಯು ಬಹಳ ಕಡಿಮೆ ದರದಲ್ಲಿ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ.
ಇನ್ನು ಕಿರಿಯ ವಯಸ್ಸಿನಲ್ಲೇ ಜೇರೋಧ ಎಂಬ ನವೋದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ನಿತಿನ್ ಕಾಮತ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನವೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಬರುವ 25% ರಷ್ಟು ದುಡಿಮೆ ಹಣವನ್ನು ಸಾಮಾಜಿಕ ಸೇವೆಗೆ ಮುಡಿಪಿಟ್ಟಿದ್ದಾರೆ.
ಇನ್ನು ಬೆಂಗಳೂರಿನ ಯುವ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಕೂಡ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದಿತಿ ಅಶೋಕ್ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದು ದೇಶಕ್ಕೆ ಕೀರ್ತಿ ತಂದಿದ್ದರು. ವಿಶ್ವ ಗಾಲ್ಫ್ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿರುವ ಆಟಗಾರ್ತಿ ಅದಿತಿ ಅಶೋಕ್ ಆಗಿದ್ದಾರೆ.
ಈ ಬಾರಿ ಆರೋಗ್ಯ, ಉದ್ದಿಮೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಈ ಮೂವರು ವ್ಯಕ್ತಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸಾಧಕರಿಗೆ ನಾಳೆ ವಿಧಾನಸೌಧದಲ್ಲಿ ನಡೆಯಲಿರುವ 514ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಳೆದ ಸರ್ಕಾರ ಹಾಸನದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿತ್ತು ಅದನ್ನು ಅಡ್ಡಿಪಡಿಸಲು ನಾವು ಇಚ್ಛಿಸುವುದಿಲ್ಲ. ಬೆಂಗಳೂರಿನ ಕಾರ್ಯಕ್ರಮ ಮುಗಿಸಿ ನಂತರ ಹಾಸನ ಕಾರ್ಯಕ್ರಮಕ್ಕೆ ತೆರಳುತ್ತೇನೆ.