ಬೆಂಗಳೂರು: ಮಕ್ಕಳ ದಿನಾಚರಣೆ (ನ.14) ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನದ ಸಂದರ್ಭದಲ್ಲಿ, ಇಂದಿನ ಮಕ್ಕಳಿಗೆ ಗ್ರಾಮ ಪಂಚಾಯತಿಯ ಪರಿಕಲ್ಪನೆ ಪರಿಚಯಿಸಲು ಮಕ್ಕಳ ಗ್ರಾಮಸಭೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, 2006ರಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಮಕ್ಕಳ ಗ್ರಾಮಸಭೆ ನಡೆಸುವಂತೆ ಸುತ್ತೋಲೆ ಹೊರಡಿಸಿದ್ದರೂ, ಕೆಲವು ಪಂಚಾಯತಿಗಳಲ್ಲಿ ಮಾತ್ರ ಮಕ್ಕಳ ಗ್ರಾಮಸಭೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ವರ್ಷದಿಂದ ಕಡ್ಡಾಯವಾಗಿ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಕಾರ್ಯಕ್ರಮ ಆಯೋಜಿಸುವಂತೆ ಅವರು ಸೂಚಿಸಿದ್ದಾರೆ.
ಮಕ್ಕಳಿಗೆ ಏನು ತಿಳಿಸಬೇಕು
- ಗ್ರಾಮ ಪಂಚಾಯತಿಯ ಕಾರ್ಯವೈಖರಿ.
- ಮಕ್ಕಳ ಹಕ್ಕುಗಳು, ಪೌಷ್ಟಿಕಾಂಶ, ಶಿಕ್ಷಣ ಮತ್ತು ಆರೋಗ್ಯ.
- ಜಾಗತಿಕ ತಾಪಮಾನ ಏರಿಕೆಯ ಈ ಕಾಲಘಟ್ಟದಲ್ಲಿ ನೈರ್ಮಲ್ಯ, ಜಲ ಸಂರಕ್ಷಣೆ, ಕೆರೆ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವ.
ಜಕ್ಕೂರಿನ ಮಾದರಿ ಗ್ರಾಮದಲ್ಲಿ ಕಾರ್ಯಕ್ರಮ
ಬೆಂಗಳೂರಿನ ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಹಳ್ಳಿ ಹೇಗಿರುತ್ತದೆ ಎಂಬ ಕಲ್ಪನೆಯೂ ಇಲ್ಲ. ಹೀಗಾಗಿ ಬೆಂಗಳೂರು ಜಕ್ಕೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರಣದಲ್ಲಿರುವ ಪಾರಂಪರಿಕ ಮಾದರಿ ಗ್ರಾಮದಲ್ಲಿ ನ.13ರಿಂದ 30ರವರೆಗೆ ಮಕ್ಕಳ ಗ್ರಾಮಸಭೆ ಆಯೋಜಿಸಿ, ವಿವಿಧ ಶಾಲೆಗಳ ಮಕ್ಕಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆಯೂ ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
