ದುಬಾರೆ ಆನೆ ಶಿಬಿರದಲ್ಲಿ ದಸರಾ ಆನೆ ‘ಕಂಜನ್’ ದಾಳಿ; ಚೆನ್ನೈ ಮಹಿಳೆ ದುರ್ಮರಣ
ಬೆಂಗಳೂರು/ಕೊಡಗು: ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ಚೆನ್ನೈನ ಮಹಿಳಾ ಪ್ರವಾಸಿಗೆಯೊಬ್ಬರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಘೋಷಿಸಿದ್ದಾರೆ.
ಮೇ 18, 2026ರಂದು ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ಸಚಿವರು ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ಮೈತೊಳೆಯುವ ವೇಳೆ ಎರಡು ಆನೆಗಳ ನಡುವೆ ನಡೆದ ಕಾದಾಟದ ಸಂದರ್ಭದಲ್ಲಿ ಪ್ರವಾಸಿಗೆಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಆನೆಯ ಕೆಳಗೆ ಸಿಲುಕಿ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ತಿಳಿಸಿದ್ದಾರೆ.
ಚೆನ್ನೈನಿಂದ ಕುಟುಂಬ ಸಮೇತ ಕೊಡಗು ಪ್ರವಾಸಕ್ಕೆ ಬಂದಿದ್ದ ಮಹಿಳೆ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಪರಿಸರ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಎಸ್ಒಪಿ ಕಡ್ಡಾಯ
ಪರಿಸರ ಪ್ರವಾಸೋದ್ಯಮದ ಚಾರಣಪಥಗಳಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸಲಾಗಿದ್ದು, ಅದು ಸಂಪೂರ್ಣ ಜಾರಿಗೆ ಬರುವವರೆಗೆ ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಾಕಾನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮ
ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಪ್ರತ್ಯೇಕ ಎಸ್ಒಪಿ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೊಸ ನಿಯಮಗಳ ಪ್ರಕಾರ:
- ಪ್ರವಾಸಿಗರು ಆನೆಗಳ ಹತ್ತಿರ ಹೋಗುವುದನ್ನು ನಿಷೇಧಿಸಲಾಗುತ್ತದೆ
- ಆನೆ ಮೈತೊಳೆಯುವ ಚಟುವಟಿಕೆ ವೀಕ್ಷಿಸಲು ಕನಿಷ್ಠ 100 ಅಡಿ ದೂರ ಕಡ್ಡಾಯ
- ಆನೆಗಳ ಬಳಿ ಸೆಲ್ಫಿ ಹಾಗೂ ಫೋಟೋ ತೆಗೆಯುವುದಕ್ಕೆ ಅವಕಾಶ ಇಲ್ಲ
- ಪ್ರವಾಸಿಗರಿಗೆ ಆನೆ ಮೈತೊಳೆಯಲು ಅವಕಾಶ ನೀಡುವುದಿಲ್ಲ
- ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ಆನೆಗಳಿಗೆ ತಿನ್ನಿಸಲು ಅವಕಾಶ ಇರುವುದಿಲ್ಲ
ಈ ಎಲ್ಲಾ ನಿಯಮಗಳನ್ನು ನಾಳೆಯಿಂದಲೇ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ದುಬಾರೆ ಆನೆ ಶಿಬಿರದಲ್ಲಿ ನಡೆದ ಈ ದುರಂತ ಘಟನೆ ಬಳಿಕ ಕರ್ನಾಟಕದ ಪರಿಸರ ಪ್ರವಾಸೋದ್ಯಮ ಕೇಂದ್ರಗಳು ಹಾಗೂ ಆನೆ ಚಟುವಟಿಕೆ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದೆ.
