ಬೆಂಗಳೂರು:
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಮೊದಲನೇ ಆರೋಪಿಯಾಗಿದ್ದಾರೆ.
ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದ ಈಶ್ವರಪ್ಪ ರಾಜೀನಾಮೆ ಪತ್ರ ಸಲ್ಲಿಸಿದರು.
ಬೊಮ್ಮಾಯಿ ಅವರಿಗೆ ಸಲ್ಲಿಸಿರುವ ಒಂದು ಸಾಲಿನ ರಾಜೀನಾಮೆ ಪತ್ರದಲ್ಲಿ ಈಶ್ವರಪ್ಪ ಅವರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ರಾಜೀನಾಮೆಯನ್ನು ಅಂಗೀಕರಿಸಿದ್ದು, ಮುಂದಿನ ಕ್ರಮಕ್ಕಾಗಿ ರಾಜ್ಯಪಾಲರಿಗೆ ರವಾನಿಸುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಪಕ್ಷ ಮತ್ತು ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕಾಪಾಡಲು ಮತ್ತು ಅವರಿಗೆ ಯಾವುದೇ ಮುಜುಗರ ಉಂಟು ಮಾಡಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಠರು ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದ ಈಶ್ವರಪ್ಪ, ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರು.