KSDL hands over record ₹135 crore dividend to government: ಕೆಎಸ್ಡಿಎಲ್ನಿಂದ ಸರ್ಕಾರಕ್ಕೆ ದಾಖಲೆಯ ₹135 ಕೋಟಿ ಲಾಭಾಂಶ ಹಸ್ತಾಂತರ – 2024–25ನೇ ಸಾಲಿನಲ್ಲಿ ₹451 ಕೋಟಿ ಲಾಭ, ₹1,700 ಕೋಟಿ ವ್ಯವಹಾರ
ಬೆಂಗಳೂರು: ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೊಪ್ ತಯಾರಿಕಾ ಸಂಸ್ಥೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) 2024–25ನೇ ಸಾಲಿನಲ್ಲಿ ದಾಖಲೆಯ ₹135 ಕೋಟಿ ಲಾಭಾಂಶ (ಡಿವಿಡೆಂಡ್) ಚೆಕ್ನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದೆ.
ಈ ಮೊತ್ತದ ಚೆಕ್ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು,
“ಕೆಎಸ್ಡಿಎಲ್ ಸಂಸ್ಥೆಯು ಕಳೆದ ಹಣಕಾಸು ವರ್ಷದಲ್ಲಿ ₹1,700 ಕೋಟಿ ವ್ಯವಹಾರ ನಡೆಸಿ ₹451 ಕೋಟಿ ಲಾಭ ದಾಖಲಿಸಿದೆ. ನಿಯಮದಂತೆ ಶೇ.30ರಷ್ಟು ಲಾಭವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ವ್ಯವಹಾರ, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಂಸ್ಥೆಯ ಇತಿಹಾಸದಲ್ಲೇ ದಾಖಲೆ,” ಎಂದು ತಿಳಿಸಿದ್ದಾರೆ.
2022–23ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್ಡಿಎಲ್ ಸಂಸ್ಥೆ ಸರ್ಕಾರಕ್ಕೆ ಕೇವಲ ₹54 ಕೋಟಿ ಲಾಭಾಂಶ ನೀಡಿತ್ತು. 2023–24ರಲ್ಲಿ ಇದು ₹108 ಕೋಟಿಗೆ ಏರಿಕೆಯಾಯಿತು. ಈ ವರ್ಷ ₹27 ಕೋಟಿಯ ಹೆಚ್ಚಳ ಕಂಡು, ಒಟ್ಟು ಲಾಭಾಂಶ ₹135 ಕೋಟಿ ತಲುಪಿದೆ.
“ಮುಂದಿನ ವರ್ಷಗಳಲ್ಲಿ ಸಂಸ್ಥೆಯ ಲಾಭ ಮತ್ತು ಲಾಭಾಂಶದ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ,” ಎಂದು ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ. ಸುಧಾಕರ್, ಸಂತೋಷ್ ಲಾಡ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಹಾಗೂ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ. ಪ್ರಶಾಂತ್ ಉಪಸ್ಥಿತರಿದ್ದರು.
