ಬೆಂಗಳೂರು:
ಭಾವಸಾರ ಕ್ಷತ್ರಿಯ ಸಮುದಾಯವು ದೇಶದ ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ಆಕ್ರಮಣಕಾರರಿಂದ ಸಂರಕ್ಷಿಸಿದ್ದು, ಬೆಲೆ ಕಟ್ಟಲಾಗದಂತಹ ದೇಶಸೇವೆಯನ್ನು ಸಲ್ಲಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾವಸಾರ ಕ್ಷತ್ರಿಯ ಸಂಘವು ಭಾನುವಾರದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಈ ಸಂಘವು ಸಮುದಾಯದ ಸಂಘಟನೆಗಳಿಗೆ ಮಾದರಿಯಾಗುವಂತಹ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದೆ. ಸಮುದಾಯದ ಸದಸ್ಯರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವತ್ತ ಗಮನ ಹರಿಸಬೇಕು’ ಎಂದರು.
ಸಮುದಾಯ ಸಂಘಟನೆಗಳು ಆರೋಗ್ಯಕರ ಮತ್ತು ಸೌಹಾರ್ದಪೂರ್ಣ ಸಮಾಜ ನಿರ್ಮಾಣಕ್ಕೆ ಕೊಡುತ್ತಿರುವ ಕಾಣಿಕೆ ದೊಡ್ಡದಾಗಿದೆ. ಹೀಗಾಗಿಯೇ, ರಾಜ್ಯ ಸರಕಾರವು ಮರಾಠಾ ಕಲ್ಯಾಣ ಮಂಡಲಿಯನ್ನು ಸ್ಥಾಪಿಸಿದೆ. ಇಂತಹ ಮಂಡಲಿಯು ಬೇರಾವ ರಾಜ್ಯದಲ್ಲೂ ಇಲ್ಲ. ಸರಕಾರವು ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಅವರು ಹೇಳಿದರು.
ಇಂತಹ ಸಂಘಗಳು ಸಮಾಜಕ್ಕೆ ತುಂಬಾ ಉಪಯುಕ್ತವಾಗಿದ್ದು, ಸಮುದಾಯದ ಸದಸ್ಯರಿಗೆ ಸುರಕ್ಷತೆ ಮತ್ತು ಭದ್ರತೆಯ ಅಭಯವನ್ನು ನೀಡಿಕೊಂಡು ಬಂದಿವೆ. ಇವುಗಳ ಮಹತ್ವ ಈಗೀಗ ಸಾರ್ವಜನಿಕ ಜೀವನದಲ್ಲಿ ಗೊತ್ತಾಗುತ್ತಿದೆ. ಭಾವಸಾರ ಕ್ಷತ್ರಿಯರು 21ನೇ ಶತಮಾನದ ಸವಾಲುಗಳನ್ನು ಎದುರಿಸಲು ರಚನಾತ್ಮಕ ಸಂಘಟನೆಗೆ ಒತ್ತು ಕೊಡಬೇಕು ಎಂದು ಅವರು ನುಡಿದರು.
ಕರ್ನಾಟಕದಲ್ಲಿ ಇರುವಷ್ಟು ವೈವಿಧ್ಯ ಬೇರೆಲ್ಲೂ ಇಲ್ಲ. ನಮ್ಮಲ್ಲಿ ಪ್ರತೀ 30-40 ಮೈಲಿಗಳಿಗೆ ಸಂಸ್ಕೃತಿ ಬದಲಾಗುತ್ತದೆ. ರಾಜ್ಯವು ಅನೇಕ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಗೆ ಈ ವೈವಿಧ್ಯ ಮತ್ತು ಇಲ್ಲಿ ನೆಲೆಸಿರುವ ಸೌಹಾರ್ದವೇ ಮೂಲಕಾರಣ. ಇದಕ್ಕೆ ತಕ್ಕಂತೆ, ಭಾವಸಾರ ಕ್ಷತ್ರಿಯರು ಮರಾಠಿ ಭಾಷಿಕರಾಗಿದ್ದರೂ ಕನ್ನಡದ ಸಂಸ್ಕೃತಿಯೊಂದಿಗೆ ಮಿಳಿತಗೊಂಡಿದ್ದಾರೆ ಎಂದು ಅವರು ಬಣ್ಣಿಸಿದರು.
ರಾಜ್ಯ ಸರಕಾರವು ಪ್ರತಿಯೊಂದು ಜನಾಂಗದ ಅಭಿವೃದ್ಧಿಗೂ ಒತ್ತು ಕೊಟ್ಟಿದೆ. ಈ ಮೂಲಕ ರಾಜ್ಯವು ಸಮಾನತೆ ಮತ್ತು ಸದೃಢತೆಯನ್ನು ಸಾಧಿಸಬಹುದು. ನಮ್ಮ ಪೂರ್ವಜರ ದೃಷ್ಟಿಕೋನ ಕೂಡ ಇದೇ ಆಗಿತ್ತು. ಆದ್ದರಿಂದ ಸಮುದಾಯಗಳ ಸದಸ್ಯರು ತಮ್ಮ ಸಂಘಟನೆಗಳೊಂದಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾವಸಾರ ಕ್ಷತ್ರಿಯ ಸಂಘದ ಮುಖಂಡ ರಾಜು ಮತ್ತಿತರರು ಭಾಗವಹಿಸಿದ್ದರು.