ಕಡತ ಚಿತ್ರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಚಿತ್ರ: ಸಿಎಂಒ ಕರ್ನಾಟಕ
ಬೆಂಗಳೂರು: ಸರ್ಕಾರಿ ಅತಿಥಿ ಗೃಹ ಕುಮಾರಕೃಪವನ್ನು ‘ಗಂಗಾ’ ಎಂದು ಮರುನಾಮಕರಣ ಮಾಡಿ ಮುಖ್ಯಮಂತ್ರಿಯ ಅಧಿಕೃತ ನಿವಾಸವಾಗಿ ಪರಿವರ್ತಿಸಲಾಗಿದೆ. ಕಟ್ಟಡದ ಪರಂಪರೆಯನ್ನು ಉಳಿಸಿಕೊಂಡು ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸೋಮವಾರ ಸ್ಪಷ್ಟಪಡಿಸಿದರು.
ಅಧಿಕೃತ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು. ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ ಪೂಜೆ ನೆರವೇರಿಸಿದ್ದೇನೆ. ಗುರುವಾರ ರಾಜ್ಯದ 224 ಶಾಸಕರು, ರಾಜ್ಯದ ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವೆ. ಆ ನಂತರ ನಾನು ಈ ಮನೆಯಲ್ಲಿ ಎಲ್ಲರನ್ನು ಭೇಟಿ ಮಾಡುವೆ. ಈ ನಿವಾಸಕ್ಕೆ ಗಂಗಾ ಎಂದು ನಾಮಕರಣ ಮಾಡಿರುವೆ” ಎಂದು ತಿಳಿಸಿದರು.
ವೆಚ್ಚದ ಬಗ್ಗೆ
“ಕೆಲವರು ಇದಕ್ಕೆ ಆಗಿರುವ ಖರ್ಚಿನ ಬಗ್ಗೆ ಪ್ರಶ್ನೆ ಮಾಡಬಹುದು. ಭದ್ರತೆ ಹಾಗೂ ರಸ್ತೆ ಸೌಕರ್ಯಕ್ಕೆ ಹೆಚ್ಚು ವೆಚ್ಚವಾಗಿದೆ. ಉಳಿದಂತೆ ಶೇ.90ರಷ್ಟು ಪೀಠೋಪಕರಣಗಳು ನನ್ನ ಖಾಸಗಿಯವು. ನಾನು ಕಡಿಮೆ (60–80 ರೂ.) ಮೌಲ್ಯದ ಗ್ರಾನೈಟ್ ಕಲ್ಲನ್ನು ಬಳಸಿದ್ದೇನೆ. ವೆಚ್ಚದ ಬಗ್ಗೆ ಟೀಕೆ ಮಾಡುತ್ತಾರೆ ಎಂಬ ಕಾರಣಕ್ಕೇ ನಾನು ನನ್ನ ಮನೆ ಮತ್ತು ಕುಮಾರಕೃಪದಲ್ಲಿದ್ದ ಹಳೆಯ ಪೀಠೋಪಕರಣ ಇಟ್ಟುಕೊಂಡಿದ್ದೇನೆ. ಕೆಲವರು ಆರ್‌ಟಿಐ ಹಾಕಿದ್ದಾರೆ” ಎಂದರು.
ಪಾರಂಪರಿಕ ಕಟ್ಟಡ, ವಿರೋಧ ಪಕ್ಷ ಮತ್ತು ಸಾರ್ವಜನಿಕ ಭೇಟಿ
ಪಾರಂಪರಿಕ ಕಟ್ಟಡವನ್ನು ಬದಲಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ ಎಂದು ಕೇಳಿದಾಗ, “ಅವರು ಇರುವುದೇ ಟೀಕೆ ಮಾಡಲು. ಅದು ಅವರ ಕರ್ತವ್ಯ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವೆ, ಅವರು ಬಂದು ನೋಡಲಿ” ಎಂದರು.
ಸಾರ್ವಜನಿಕರ ಭೇಟಿಗೆ ಅವಕಾಶವಿದೆಯೇ ಎಂದು ಕೇಳಿದಾಗ, ಶಾಸಕರು ಮತ್ತು ಅಧಿಕಾರಿಗಳ ಭೇಟಿ, ಚರ್ಚೆಗೆ ಇಲ್ಲಿ ಅವಕಾಶ ಕಲ್ಪಿಸಲಾಗುವುದು; ಸಾರ್ವಜನಿಕ ಭೇಟಿಗಾಗಿ ಪಕ್ಕದ ಕೃಷ್ಣಾದಲ್ಲಿ ಪ್ರತ್ಯೇಕ ಹಾಲ್ ನಿರ್ಮಿಸಲಾಗುತ್ತಿದ್ದು, ಇದಕ್ಕೆ ಒಂದೆರಡು ತಿಂಗಳು ಬೇಕಾಗುತ್ತದೆ ಎಂದು ಶಿವಕುಮಾರ್ ತಿಳಿಸಿದರು. “ನಾವು ಯಾರೂ ಇಲ್ಲಿ ಶಾಶ್ವತವಲ್ಲ. ರಾಜ್ಯದ ಮುಖ್ಯಮಂತ್ರಿಯಾದವರಿಗೆ ಇದು ಅನುಕೂಲವಾಗಲಿ, ಈ ಅತಿಥಿ ಗೃಹದ ಜಾಗ ವ್ಯರ್ಥವಾಗುವುದು ಬೇಡ ಎಂದು ಈ ತೀರ್ಮಾನಕ್ಕೆ ಬರಲಾಗಿದೆ” ಎಂದರು.
ದೆಹಲಿ ಭೇಟಿ ಬಗ್ಗೆ ಕೇಳಿದಾಗ, ತಾವು ದೆಹಲಿಗೆ ಹೋಗುತ್ತಿದ್ದು, ಇಂದು ರಾತ್ರಿಯೇ ವಾಪಸ್ ಆಗುವುದಾಗಿ ತಿಳಿಸಿದರು. ಮಾಧ್ಯಮದವರು ಹೇಳಿದ ವಿಚಾರದ ಬಗ್ಗೆ ಚರ್ಚೆಗೆ ಸಮಯಾವಕಾಶವಿಲ್ಲ, ನಾಯಕರೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬಂದು ಇಲ್ಲೇ ಮಲಗುವುದಾಗಿ ಹೇಳಿದರು.
