ಕಾನೂನು ಮಾಪನ ಶಾಸ್ತ್ರ ಇಲಾಖೆಯ ತಪಾಸಣೆ ವೇಳೆ ಎಪಿಎಂಸಿ ಯಾರ್ಡ್‌ನಲ್ಲಿ ಸಚಿವ ರಿಜ್ವಾನ್ ಅರ್ಷದ್; ಇಲಾಖೆ ಹಂಚಿಕೊಂಡ ಚಿತ್ರ. ಚಿತ್ರ: ಆಹಾರ, ನಾಗರಿಕ ಪೂರೈಕೆ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ
ಬೆಂಗಳೂರು: ರಾಜ್ಯದ ಒಂಬತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ಗಳಲ್ಲಿ ಸೋಮವಾರ ಏಕಕಾಲಕ್ಕೆ ತಪಾಸಣೆ ನಡೆಸಿದ ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು 711 ಅಂಗಡಿಗಳನ್ನು ಪರಿಶೀಲಿಸಿ, 275 ವರ್ತಕರ ವಿರುದ್ಧ ಪ್ರಕರಣ ದಾಖಲಿಸಿ, ₹9.8 ಲಕ್ಷ ದಂಡ ವಿಧಿಸಿದ್ದಾರೆ ಎಂದು ಆಹಾರ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಲಾಖೆಯ ‘ಮಿಷನ್ ನಿಖರ’ ಕಾರ್ಯಕ್ರಮದ ಮುಂದುವರಿದ ಭಾಗವಾದ ಈ ಕಾರ್ಯಾಚರಣೆಯನ್ನು, ರೈತರಿಗೆ ಉತ್ಪನ್ನಗಳ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವ ರಿಜ್ವಾನ್ ಅರ್ಷದ್ ಅವರ ಸೂಚನೆಯಂತೆ ನಡೆಸಲಾಯಿತು. 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಗಂಗಾವತಿ, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ಬ್ಯಾಡಗಿ ಸೇರಿದಂತೆ ಎಪಿಎಂಸಿ ಯಾರ್ಡ್‌ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ತಪಾಸಣೆ ಆರಂಭಿಸಿದ್ದು, ಮಧ್ಯಾಹ್ನ 1.30ರವರೆಗೆ ಮುಂದುವರಿಯಿತು.
ಉಲ್ಲಂಘನೆಗಳು ಮತ್ತು ವಶಪಡಿಸಿಕೊಂಡ ಯಂತ್ರಗಳು
ತೂಕದಲ್ಲಿ ಮೋಸ, ದೋಷಪೂರಿತ ಯಂತ್ರಗಳ ಬಳಕೆ, ನಿಗದಿತ ಅವಧಿಯೊಳಗೆ ತೂಕದ ಯಂತ್ರಗಳನ್ನು ಇಲಾಖೆಯಿಂದ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದಿರುವುದು ಹಾಗೂ ಸತ್ಯಾಪನೆ ಪ್ರಮಾಣಪತ್ರವನ್ನು ಅಂಗಡಿಗಳಲ್ಲಿ ಪ್ರದರ್ಶಿಸದಿರುವುದಕ್ಕಾಗಿ ವರ್ತಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೋಷಪೂರಿತ ಹಾಗೂ ಸತ್ಯಾಪನೆ, ಮುದ್ರೆ ಮಾಡಿಸದ ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನಲ್ಲಿ ಅತಿ ಹೆಚ್ಚು, 180 ತಪಾಸಣೆ ನಡೆದಿದ್ದು, 60 ಪ್ರಕರಣ ದಾಖಲಾಗಿವೆ. ಬೆಂಗಳೂರಿನ ಯಶವಂತಪುರ ಎಪಿಎಂಸಿಯಲ್ಲಿ ಅತಿ ಹೆಚ್ಚು, ₹2.7 ಲಕ್ಷ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೈಸೂರಿನ ಬಂಡಿಪಾಳ್ಯ ಯಾರ್ಡ್‌ನಲ್ಲಿ ಸಚಿವರು
ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿ ಸಚಿವ ರಿಜ್ವಾನ್ ಅರ್ಷದ್ ಅವರು ತಪಾಸಣೆಯ ನೇತೃತ್ವ ವಹಿಸಿ, ಹಲವು ಮಳಿಗೆಗಳಲ್ಲಿ ರೈತರ ಉತ್ಪನ್ನಗಳನ್ನು ಖುದ್ದಾಗಿ ತೂಕ ಮಾಡಿಸಿ, ದೋಷಪೂರಿತ ಎಂದು ಕಂಡುಬಂದ ಯಂತ್ರಗಳನ್ನು ಜಪ್ತಿ ಮಾಡಿಸಿದರು. ತೂಕದಲ್ಲಿ ಮೋಸ ಮಾಡುವ ಹಾಗೂ ದೋಷಪೂರಿತ ಯಂತ್ರಗಳನ್ನು ಬಳಸುವ ವರ್ತಕರಿಗೆ ಎಚ್ಚರಿಕೆ ನೀಡಿದ ಅವರು, ಇಂತಹವುಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
“ರೈತರು ಮಾರುಕಟ್ಟೆಗೆ ತರುವ ಪ್ರತಿ ಉತ್ಪನ್ನದ ತೂಕವನ್ನು ಪ್ರಾಮಾಣಿಕವಾಗಿ ಮಾಡಬೇಕು. ರಾಜ್ಯದ ಎಪಿಎಂಸಿಗಳಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಪ್ರತಿಯೊಂದು ವ್ಯವಹಾರವೂ ನಿಖರತೆ ಮತ್ತು ಪಾರದರ್ಶಕತೆಯಿಂದ ಕೂಡಿರಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪ,” ಎಂದು ಸಚಿವರು ಹೇಳಿದರು. ಇಂತಹ ತಪಾಸಣೆಗಳು ಮುಂದೆಯೂ ನಿರಂತರವಾಗಿ ನಡೆಯಲಿವೆ ಎಂದು ಅವರು ತಿಳಿಸಿದರು.
ರೈತರು ತಮ್ಮ ಉತ್ಪನ್ನಗಳ ತೂಕದಲ್ಲಿ ಸಂಶಯ ಕಂಡುಬಂದರೆ ದೃಢೀಕರಿಸಿಕೊಳ್ಳಲು ಅನುವಾಗುವಂತೆ ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಇಲಾಖೆಯ ವತಿಯಿಂದಲೇ ಒಂದು ಮಾದರಿ ತೂಕದ ಯಂತ್ರವನ್ನು ಇಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಎಲ್ಲ ಮಾರುಕಟ್ಟೆಗಳಲ್ಲಿ ಪ್ರಮಾಣಿತ ತೂಕದ ಆಚರಣೆಗಳ ಕುರಿತು ಡಿಸ್ಪ್ಲೇ ಬೋರ್ಡ್‌ಗಳನ್ನು ಅಳವಡಿಸುವಂತೆಯೂ ನಿರ್ದೇಶನ ನೀಡಿದರು.
