Home ರಾಜಕೀಯ ಕುಮಾರಸ್ವಾಮಿ ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಎದುರಿಸಲಿ : ಡಿ.ಕೆ.ಸುರೇಶ್

ಕುಮಾರಸ್ವಾಮಿ ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಎದುರಿಸಲಿ : ಡಿ.ಕೆ.ಸುರೇಶ್

11
0

ಚನ್ನಪಟ್ಟಣ (ರಾಮನಗರ) : ಸಾಮಾನ್ಯ ಪರಿಜ್ಞಾನ ಇಲ್ಲದೆ ಕೇಂದ್ರ ಮಂತ್ರಿಯಾಗಿರುವ ಕುಮಾರಸ್ವಾಮಿ, ಆರೋಪ ಮಾಡುವುದನ್ನು ಬಿಟ್ಟು ಚುನಾವಣೆ ಮಾಡಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಶನಿವಾರ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಜನರನ್ನು ಕರೆತಂದ ಬಸ್ ಗಳನ್ನು ಸೀಜ್ ಮಾಡಿ ಎನ್ ಸಿಆರ್ ಹಾಕಿಸಲಾಗಿದೆ ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಕುಮಾರಸ್ವಾಮಿ ಅನೇಕ ಚುನಾವಣೆಗಳನ್ನು ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಬಗ್ಗೆ ಅವರಿಗೂ ಜ್ಞಾನವಿದೆ. ನೀತಿ ಸಂಹಿತೆ ಸಮಯದಲ್ಲಿ ಯಾರು ಯಾವ ಪಾತ್ರ ವಹಿಸುತ್ತಾರೆ, ಪ್ರಕ್ರಿಯೆ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ನೀತಿ ಸಂಹಿತೆ ಉಲ್ಲಂಘನೆ ಆಗಿದ್ದರೆ ಅದು ಚುನಾವಣಾ ಅಧಿಕಾರಿಗಳಿಗೆ ಸಂಬಂಧಪಟ್ಟ ವಿಚಾರ. ಅದು ನಮಗೆ ಸಂಬಂಧಿಸುವುದಿಲ್ಲ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಆರೋಪ ಮಾಡುವುದನ್ನೇ ಅಭ್ಯಾಸ ಮಾಡಿಕೊಂಡು, ದಿನ ನಿತ್ಯ ಕಾಂಗ್ರೆಸ್ ವಿರುದ್ಧ ದೂಷಣೆ ಮಾಡುತ್ತಿದ್ದಾರೆ. ಅವರು ಬಸ್ ಗಳಲ್ಲಿ ಜನರನ್ನು ಕರೆ ತಂದಿದ್ದರೆ, ಅದಕ್ಕೆ ಲೆಕ್ಕ ಕೊಡಬೇಕು. ಅದಕ್ಕಾಗಿ ಅನುಮತಿ ಪಡೆಯಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲವಾದರೆ, ಅವರು ಹೇಗೆ ಕೇಂದ್ರ ಸಚಿವರಾಗಿದ್ದಾರೆ. ಸಂವಿಧಾನದ ಬಗ್ಗೆ ಮೊದಲು ತಿಳಿದುಕೊಳ್ಳಲಿ. ಬಸ್ ಗಳಿಗೂ ನಮಗೂ ಏನು ಸಂಬಂಧ? ಎಂದು ಸುರೇಶ್ ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ ಅಭ್ಯರ್ಥಿಯಿಲ್ಲ ಹೀಗಾಗಿ ಯೋಗೇಶ್ವರ್ ಅವರನ್ನು ಹೈಜಾಕ್ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, ಯೋಗೇಶ್ವರ್ 9 ಬಾರಿ ಚುನಾವಣೆ ಎದುರಿಸಿ ಐದು ಬಾರಿ ಶಾಸಕರಾಗಿದ್ದಾರೆ. ನಿಮ್ಮ ಮಗನನ್ನು ಚುನಾವಣೆಯಲ್ಲಿ ನಿಲ್ಲಿಸಲು ತಂತ್ರಗಾರಿಕೆ ಮಾಡಿ ಯೋಗೇಶ್ವರ್ ಅವರನ್ನು ಆಚೆ ಕಳಿಸಿದ್ದೀರಿ. ನೀವೇ ಆಚೆ ಹಾಕಿ ಈಗ ಕಾಂಗ್ರೆಸ್ ಮೇಲೆ ದೂಷಣೆ ಮಾಡಬೇಡಿ ಎಂದು ಅವರು ತಿರುಗೇಟು ನೀಡಿದರು.

LEAVE A REPLY

Please enter your comment!
Please enter your name here