Home ತುಮಕೂರು ತುಮಕೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ, ಕ್ರೀಡಾಕೂಟಗೃಹ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪೂರ್ವಭಾವಿ ಸಮಾಲೋಚನೆ

ತುಮಕೂರಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ, ಕ್ರೀಡಾಕೂಟಗೃಹ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪೂರ್ವಭಾವಿ ಸಮಾಲೋಚನೆ

21
0


ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಹಾಗೂ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಶೈಕ್ಷಣಿಕ ನಾಡು ತುಮಕೂರಿನಲ್ಲಿ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಹಾಗೂ ನವೆಂಬರ್ ಮೂರನೇ ವಾರದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ ಆರಂಭಗೊಂಡಿದ್ದು, ಪೂರ್ವಭಾವಿಯಾಗಿ ಶುಕ್ರವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರೊಡನೆ ಎರಡು ರಾಜ್ಯಮಟ್ಟದ ಕಾರ್ಯಕ್ರಮಗಳು ಜಿಲ್ಲಾಕೇಂದ್ರದಲ್ಲಿ ನೆರವೇರಿಸುವ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಜಾಸ್ ಟೋಲ್ ಬಳಿಯ ಸಿದ್ಧಾರ್ಥ ಸ್ಕೂಲ್ ಎಂಜಿನಿಯರಿಂಗ್‌ನ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ರಾಷ್ಟ್ರೀಯ ಮಂಡಳಿ ಸದಸ್ಯರಾದ ಟಿ.ಎನ್.ಮಧುಕರ್, ಅನುಶಾಂತರಾಜ್ ಹಾಗೂ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು ಎರಡು ಕಾರ್ಯಕ್ರಮಗಳ ರೂಪುರೇಶೆಯನ್ನು ವಿವರಿಸಿದರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಅವರು ಮಾತನಾಡಿ ಹಿಂದೆ 2012ರಲ್ಲಿ ರಾಷ್ಟ್ರೀಯ ಸಮ್ಮೇಳನ ತಮ್ಮ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಜಿಲ್ಲೆಯಲ್ಲಿ ನೆರವೇರಿದೆ. ಜಿಲ್ಲಾ ಘಟಕದವರು ಉತ್ಸುಕತೆಯಿಂದ ರಾಜ್ಯಸಮ್ಮೇಳನ ಹಾಗೂ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಸಂಘಟಿಸಲು ಮುಂದೆ ಬಂದಿದ್ದಾರೆ. ಬರುವ ಡಿಸೆಂಬರ್ ಇಲ್ಲವೇ ಜನವರಿಯಲ್ಲಿ 2 ದಿನಗಳ ಕಾಲ ಸಮ್ಮೇಳನ ಆಯೋಜನೆ ಮಾಡಲು ಚರ್ಚಿಸಿದ್ದು, ಸುಮಾರು 6೦೦೦ ಮಂದಿ ಕಾರ್ಯನಿರತ ಪತ್ರಕರ್ತರು ಅವರ ಕುಟುಂಬದವರು ಸಮ್ಮೇಳನಕ್ಕೆ ರಾಜ್ಯದ ಎಲ್ಲಾ ಭಾಗದಿಂದ ಆಗಮಿಸಲಿದ್ದಾರೆ. ಇದಕ್ಕೂ ಮೊದಲೇ ಒಂದು ದಿನದ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನ.24 ಭಾನುವಾರದಂದು ಆಯೋಜಿಸಲು ತೀರ್ಮಾನಿಸಿದ್ದು, ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಭಾರತ ತಂಡದ ಮಾಜಿ ನಾಯಕ ರಾಹುಲ್‌ಡ್ರಾವಿಡ್/ ಅನಿಲ್‌ಕುಂಬ್ಳೆ ಅವರನ್ನು ಉದ್ಘಾಟನೆಯ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗುವುದು. ಎರಡು ಕಾರ್ಯಕ್ರಮಕ್ಕೆ ತಮ್ಮ ಪ್ರಧಾನ ಸಾರಥ್ಯ, ಸಹಕಾರ ಅತ್ಯಗತ್ಯವಾಗಿದೆ ಎಂದು ಸಚಿವ ಪರಮೇಶ್ವರ ಅವರನ್ನು ಕೋರಿದರು.

ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು ಮಾತನಾಡಿ ತುಮಕೂರಿನಲ್ಲಿ ಅತ್ಯಂತ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಮಹಾತ್ಮಗಾಂಧಿ ಕ್ರೀಡಾಂಗಣ ರಾಜ್ಯದವರೆಲ್ಲರಿಗೂ ಪರಿಚಯವಾಗಬೇಕೆಂಬ ನಿಟ್ಟಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟವನ್ನು ಸ್ಟೇಡಿಯಂನಲ್ಲೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಉದ್ಘಾಟಕರಾಗಿ ತಾವೇ ಆಗಮಿಸಬೇಕೆಂದು ಸಚಿವ ಪರಮೇಶ್ವರ್ ಅವರಲ್ಲಿ ವಿನಂತಿಸಿದರು.

ಸಂಘದ ಮನವಿಗೆ ಪೂರಕವಾಗಿ ಸ್ಪಂದಿಸಿ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್ ಅವರು ಪತ್ರಕರ್ತರಿಗೆ ಸಂಬಂಧಿಸಿದ ರಾಜ್ಯಮಟ್ಟದ ಎರಡು ಕಾರ್ಯಕ್ರಮಗಳು ನಮ್ಮ ಜಿಲ್ಲೆ ಆತಿಥ್ಯ ವಹಿಸುತ್ತಿರುವುದು ಸಂತಸದ ಸಂಗತಿ. ಹಿಂದೆ ೨ ರಾಷ್ಟ್ರೀಯ ಸಮ್ಮೇಳನಗಳು ಅತ್ಯಂತ ವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ನಡೆದಿವೆ. ಎಲ್ಲರೂ ಸೇರಿ ರಾಜ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸೋಣ. ಸಿಎಂ ಅವರನ್ನು ಆಹ್ವಾನಿಸೋಣ. ತುಮಕೂರಿನ ಎಂ.ಜಿ. ಕ್ರೀಡಾಂಗಣವನ್ನು ಮಾದರಿಯಾಗಿ ನಿರ್ಮಿಸಲಾಗಿದೆ. ಇದನ್ನು ರಾಜ್ಯ, ರಾಷ್ಟçದ ವಿವಿಧೆಡೆಯವರು ಬಂದು ವೀಕ್ಷಿಸಲು ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಪೂರಕವಾಗಲಿದೆ ಎಂದು ಭಾವಿಸುತ್ತೇನೆ. ನಿಮ್ಮೊಂದಿಗೆ ನಾವಿರುತ್ತೇವೆ ವ್ಯವಸ್ಥಿತವಾಗಿ ಸಂಘಟಿಸಿ ಎಂದು ಸಲಹೆಯಿತ್ತರು.

ಸಮ್ಮೇಳನದ ಅಂದಾಜು ಪಟ್ಟಿಯನ್ನು ಸಚಿವರಿಗೆ ಇದೇ ವೇಳೆ ಸಲ್ಲಿಸಲಾಯಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ, ಕಾರ್ಯದರ್ಶಿ ಸತೀಶ್ ಹಾರೋಗೆರೆ, ನಿರ್ದೇಶಕರಾದ ಪರಮೇಶ್, ಜಯಣ್ಣ ಜಯನುಡಿ, ಶಂಕರ್‌ಶಿರಾ, ಯಶಸ್ ಪದ್ಮನಾಭ್, ಕಾಗ್ಗೆರೆ ಸುರೇಶ್, ಕುಣಿಗಲ್ ರವೀಂದ್ರಕುಮಾರ್ ಇತರರಿದ್ದರು.

LEAVE A REPLY

Please enter your comment!
Please enter your name here