ಬೆಂಗಳೂರು, ಡಿ.17: ರಾಜ್ಯದ ವಿವಿಧ ಆರ್ಟಿಓ ಕಚೇರಿಗಳಲ್ಲಿ ಐಷಾರಾಮಿ ಕಾರುಗಳ ನೋಂದಣಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ, ನಿಜವಾದ ವಾಹನ ಮೌಲ್ಯವನ್ನು ಮರೆಮಾಚಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಯಾವುದೇ ಪ್ರಯತ್ನಗಳನ್ನು ಸಹಿಸಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಶರವಣ ಟಿ.ಎ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಗಳೂರು ಮತ್ತು ಉಡುಪಿ ಆರ್ಟಿಓ ಕಚೇರಿಗಳಲ್ಲಿ ನಡೆದ ಗಂಭೀರ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಐಷಾರಾಮಿ ಕಾರುಗಳ ನಿಜವಾದ ಮೌಲ್ಯವನ್ನು ಕಡಿಮೆ ತೋರಿಸಿ ನೋಂದಣಿ ಮಾಡಿ ಸರ್ಕಾರಕ್ಕೆ ಆದಾಯ ನಷ್ಟ ಉಂಟುಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಮಂಗಳೂರು ಆರ್ಟಿಓ ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕರು, ಅಧೀಕ್ಷಕರು ಮತ್ತು ಪ್ರಥಮ ದರ್ಜೆ ಸಹಾಯಕರು, ಹಾಗೂ ಉಡುಪಿ ಆರ್ಟಿಓ ಕಚೇರಿಯ ಅಧೀಕ್ಷಕರು ಅಮಾನತುಗೊಂಡಿದ್ದು, ವಿಭಾಗೀಯ ವಿಚಾರಣೆ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದರು.
ಇದಲ್ಲದೆ, ಲೋಕಾಯುಕ್ತ ಪೊಲೀಸ್ ಪ್ರಸ್ತಾವನೆಯ ಮೇರೆಗೆ, ಉಡುಪಿ ಪ್ರಾದೇಶಿಕ ಸಾರಿಗೆಾಧಿಕಾರಿ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯ ಕಲಂ 17(ಎ) ಅಡಿಯಲ್ಲಿ ಪೂರ್ವಾನುಮತಿ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದ ಯಾವುದೇ ಆರ್ಟಿಓಗಳಲ್ಲಿ ಇದೇ ರೀತಿಯ ಅಕ್ರಮಗಳು ನಡೆದರೆ, ತಕ್ಷಣ ಅಮಾನತು, ಕ್ರಿಮಿನಲ್ ಪ್ರಕರಣ ಹಾಗೂ ಕಠಿಣ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ಎಚ್ಚರಿಸಿದರು.
ಐಷಾರಾಮಿ ಮತ್ತು ಹೈಎಂಡ್ ವಾಹನಗಳ ನೋಂದಣಿ ಪ್ರಕ್ರಿಯೆ ಮೇಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ನಿಗಾ ವಹಿಸಿದ್ದು, ಪಾರದರ್ಶಕತೆ ಮತ್ತು ಜವಾಬ್ದಾರಿಯುತ ಆಡಳಿತವೇ ಸರ್ಕಾರದ ಆದ್ಯತೆ ಎಂದು ಸಚಿವರು ಹೇಳಿದರು.
