ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್ ನಬೀನ್ ಅವರಿಗೆ ವಿಜಯೇಂದ್ರ ಅಭಿನಂದನೆ
ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ನಿತಿನ್ ನಬೀನ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಯುವ ಸಮೂಹವೇ ಬಿಜೆಪಿಯ ಬಹುದೊಡ್ಡ ಶಕ್ತಿ ಎಂದು ಬಣ್ಣಿಸಿ, ಯುವ ನಾಯಕತ್ವವನ್ನು ಗುರುತಿಸಿ ಮುನ್ನಡೆಸುವುದು ಪಕ್ಷದ ಆದ್ಯತೆ ಹಾಗೂ ಬದ್ಧತೆಯಾಗಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಯುವ ನಾಯಕ ನಿತಿನ್ ನಬೀನ್ ಅವರನ್ನು ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ದೇಶದ ಯುವಜನತೆಗೆ ಸ್ಪಷ್ಟ ಪ್ರೇರಣೆಯ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.
ಬಿಜೆಪಿಯ ಇತಿಹಾಸದಲ್ಲಿ ಅತ್ಯುನ್ನತ ಜವಾಬ್ದಾರಿಯನ್ನು ವಹಿಸಿಕೊಂಡ ಯುವ ನಾಯಕ ಎಂಬ ಹೆಗ್ಗಳಿಕೆಗೆ ನಿತಿನ್ ನಬೀನ್ ಪಾತ್ರರಾಗಿದ್ದಾರೆ ಎಂದು ವಿಜಯೇಂದ್ರ ಪ್ರಶಂಸಿಸಿದರು. ಪಕ್ಷನಿಷ್ಠೆ, ಕ್ರಿಯಾಶೀಲತೆ, ರಾಷ್ಟ್ರಬದ್ಧತೆ ಹಾಗೂ ಸಂಘಟನಾ ಸಾಮರ್ಥ್ಯವನ್ನು ಅವರು ತಮ್ಮ ರಾಜಕೀಯ ಪಯಣದಲ್ಲಿ ಸಮರ್ಥವಾಗಿ ಪ್ರದರ್ಶಿಸಿದ್ದಾರೆ ಎಂದರು.
ಬಿಹಾರದಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಅಪಾರ ಜನಮನ್ನಣೆ ಪಡೆದಿರುವ ನಿತಿನ್ ನಬೀನ್, ಇದೀಗ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನ ವಹಿಸುವ ಮೂಲಕ ಪಕ್ಷದ ಯುವ ಕಾರ್ಯಕರ್ತರಿಗೆ ಪ್ರೇರಣೆಯ ಶಕ್ತಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಬಿಜೆಪಿಯ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸವನ್ನು ವಿಜಯೇಂದ್ರ ವ್ಯಕ್ತಪಡಿಸಿದರು.
