
Madikeri: Forest department personnel killed in Elephant attack
ಮಡಿಕೇರಿ:
ಮಡಿಕೇರಿ ತಾಲೂಕಿನ ಕೆದಕಲ್ ನಲ್ಲಿ ಆನೆ ವಿರುದ್ಧದ ಕಾರ್ಯಾಚರಣೆ ವೇಳೆ ದಾಳಿ ನಡೆದಿದ್ದು ಕುಶಾಲನಗರ ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿ ಗಿರೀಶ್ (35) ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಕೆದಕಲ್ ನಿವಾಸಿ ಮುರುಗೇಶ್ ಎಂಬುವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಆನೆ ದಿಢೀರ್ ದಾಳಿಗೆ ಮುಂದಾಗಿತ್ತು. ಇಂದರಿಂದ ಬೈಕ್ ಸವಾರ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಂಟಿಕೊಪ್ಪದಿಂದ ಕೆಲಸಕ್ಕೆಂದು ಡಿ ಬ್ಲಾಕ್ ಬಳಿ ತೆರಳುತ್ತಿದ್ದ ವೇಳೆ ಏಕಾಏಕಿ ನುಗ್ಗಿ ದಾಳಿ ನಡೆಸಿದೆ. ಅಲ್ಲಿಂದ ಪಲಾಯನ ಮಾಡಿದ ಕಾಡಾನೆ, ಹಬೀಬ್ ತೋಟದತ್ತ ತೆರಳುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ನಡೆಸಿದೆ. ಇನ್ನು ಪುಂಡಾನೆಯನ್ನ ಕಾಡಿಗೆ ಓಡಿಸಲು ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ.
ಈ ಘಟನೆಯ ನಂತರ, ಕೆದಕಲ್ ಎಸ್ಟೇಟ್‌ಗಳಾದ್ಯಂತ ಹಿಂಡು ಹಿಂಡಾಗಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ರಾಪಿಡ್ ರೆಸ್ಪಾನ್ಸ್ ಟೀಮ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.
ಅಂತೆಯೇ, ಆರ್‌ಆರ್‌ಟಿ ಸಿಬ್ಬಂದಿ ಆನೆ ಓಡಿಸುವ ಕಾರ್ಯಾಚರಣೆಗೆ ಮುಂದಾದರು. ಎಸ್ಟೇಟ್‌ಗಳಲ್ಲಿ ಹಿಂಡು ಹಿಂಡಾಗಿ ಬೀಡುಬಿಟ್ಟಿದ್ದ ಆನೆಗಳನ್ನು ಪತ್ತೆ ಹಚ್ಚಿದ ತಂಡ ಪಟಾಕಿ ಸಿಡಿಸಿ ಮತ್ತೆ ಕಾಡಿಗೆ ಓಡಿಸಿತು. ಆದರೆ, ಕಾಡಾನೆಯೊಂದು ಪ್ರತಿದಾಳಿ ನಡೆಸಿತ್ತು. ಈ ವೇಳೆ ಕೆಲವರು ಪ್ರಾಣಾಪಾಯದಿಂದ ಪಾರಾದರೆ, ದಾಳಿಯಲ್ಲಿ ಗಿರೀಶ್ ಸಿಕ್ಕಿಬಿದ್ದಿದ್ದಾರೆ. ಗಿರೀಶ್‌ನನ್ನು ಆನೆ ತುಳಿದು ಸಾಯಿಸಿದ್ದನ್ನು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ.
ಕಾರ್ಯಾಚರಣೆ ನಿರ್ವಹಿಸಲು ಸಿಬ್ಬಂದಿ ಸುಸಜ್ಜಿತರಾಗಿದ್ದರು. ಆದರೆ ಆನೆ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಗಿರೀಶ್ ಅವರ ಜೇಬಿನಲ್ಲಿ ಪಟಾಕಿಗಳಿದ್ದವು, ಆದರೆ ದಾಳಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದು ಮಡಿಕೇರಿ ಡಿಸಿಎಫ್ ಎಟಿ ಪೂವಯ್ಯ ಖಚಿತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿರೀಶ್ ಸಹೋದರಿಯನ್ನು ಅಗಲಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಇಲಾಖೆಯಲ್ಲಿದ್ದರು ಎಂದು ಹೇಳಿದರು.