ಮುತ್ತತ್ತಿ ದುರಂತ: ಜಲಸಮಾಧಿಯಾಗುವ ಕೆಲವೇ ಕ್ಷಣಗಳ ಮುನ್ನದ ಕೊನೆಯ ವಿಡಿಯೋ ವೈರಲ್; ರಕ್ಷಿಸಲು ಹೋಗಿ ಐವರ ದಾರುಣ ಸಾವು
ಮಂಡ್ಯ, ಜೂನ್ 25: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಕಾವೇರಿ ನದಿಯಲ್ಲಿ ಐವರು ಜಲಸಮಾಧಿಯಾದ ದುರಂತದ ಕೆಲವೇ ಕ್ಷಣಗಳ ಮುನ್ನ ಚಿತ್ರೀಕರಿಸಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಖುಷಿಯಿಂದ ನದಿಗೆ ಇಳಿದು ಆಟವಾಡುತ್ತಿದ್ದ ನಾಲ್ವರು ಮಹಿಳೆಯರು ಕೆಲವೇ ನಿಮಿಷಗಳಲ್ಲಿ ಜೀವ ಕಳೆದುಕೊಂಡಿರುವುದು ಮನಕಲಕುವಂತಿದೆ.
ಮೃತರು ಬೆಂಗಳೂರಿನಿಂದ ಕಬ್ಬಾಳದಲ್ಲಿದ್ದ ಸಂಬಂಧಿಕರ ಕಾರ್ಯಕ್ರಮ ಹಾಗೂ ದೇವರ ದರ್ಶನಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಬರುವ ವೇಳೆ ಮುತ್ತತ್ತಿಗೆ ಭೇಟಿ ನೀಡಿ ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿ, ನೀರಿನಲ್ಲಿ ಆಟವಾಡುತ್ತಾ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ನಾಲ್ವರು ಮಹಿಳೆಯರು ಕೈ ಹಿಡಿದು ಸಂತೋಷದಿಂದ ನೀರಿನಲ್ಲಿ ಇಳಿಯುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಕೆಲವೇ ಕ್ಷಣಗಳಲ್ಲಿ ಈ ಸಂತೋಷ ದುರಂತವಾಗಿ ಮಾರ್ಪಟ್ಟಿದೆ.
ಒಬ್ಬರನ್ನು ರಕ್ಷಿಸಲು ಹೋಗಿ ಐವರು ಬಲಿ
ದುರಂತದಿಂದ ಬದುಕುಳಿದಿರುವ ರವಿ ನೀಡಿದ ಮಾಹಿತಿಯ ಪ್ರಕಾರ, ಮೊದಲಿಗೆ ಅವರ ಅಕ್ಕ ವಿಜಯಮ್ಮ ಕಾಲು ಜಾರಿ ಆಳವಾದ ನೀರಿಗೆ ಬಿದ್ದಿದ್ದಾರೆ.
ಅವರನ್ನು ರಕ್ಷಿಸಲು ರವಿ ಅವರ ಪತ್ನಿ, ಮಗಳು, ಅಕ್ಕನ ಮಗಳು ಸೇರಿದಂತೆ ಇತರರು ಮುಂದಾಗಿದ್ದಾರೆ. ಬಳಿಕ ಅವರನ್ನು ರಕ್ಷಿಸಲು ಕಾರು ಚಾಲಕ ಮಹೇಶ್ ಕೂಡ ನದಿಗೆ ಇಳಿದಿದ್ದಾರೆ.
ಆದರೆ ರಕ್ಷಣಾ ಕಾರ್ಯವೇ ದುರಂತಕ್ಕೆ ತಿರುಗಿ ಐವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರವಿ ಕೂಡ ಅವರನ್ನು ರಕ್ಷಿಸಲು ನದಿಗೆ ಇಳಿದಾಗ ಮುಳುಗಲು ಆರಂಭಿಸಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಹೊರತೆಗೆದಿದ್ದಾರೆ.
ದೇವರ ದರ್ಶನದ ಬಳಿಕ ಸಂಭವಿಸಿದ ದುರಂತ
ಕುಟುಂಬದವರು ಕಬ್ಬಾಳದಲ್ಲಿ ದೇವರ ದರ್ಶನ ಹಾಗೂ ಊಟ ಮುಗಿಸಿಕೊಂಡು ಬೆಂಗಳೂರಿಗೆ ಮರಳುವ ಮಾರ್ಗದಲ್ಲಿ ಮುತ್ತತ್ತಿಗೆ ಭೇಟಿ ನೀಡಿದ್ದರು. ನದಿಯಲ್ಲಿ ನೀರು ಕಡಿಮೆ ಇರುವಂತೆ ಕಂಡಿದ್ದರಿಂದ ಪೂಜೆ ಮುಗಿಸಿ ಕಾಲು ತೊಳೆಯಲು ಹಾಗೂ ಆಟವಾಡಲು ಇಳಿದ ವೇಳೆ ಈ ದುರ್ಘಟನೆ ನಡೆದಿದೆ.
ಮಂಡ್ಯ ಜಿಲ್ಲಾಧಿಕಾರಿಯಿಂದ ಸಾಂತ್ವನ
ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ನದಿಯಲ್ಲಿ ಫೋಟೋ ತೆಗೆಯುವ ವೇಳೆ ಒಬ್ಬರು ಜಾರಿ ಬಿದ್ದಿದ್ದು, ಅವರನ್ನು ರಕ್ಷಿಸಲು ಉಳಿದವರು ನದಿಗೆ ಇಳಿದ ಪರಿಣಾಮ ಐವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
“ಕುಟುಂಬದ ಸದಸ್ಯರನ್ನು ಉಳಿಸಬೇಕು ಎಂಬ ಭಾವನೆಯಲ್ಲಿ ಒಬ್ಬರ ಹಿಂದೆ ಮತ್ತೊಬ್ಬರು ನೀರಿಗೆ ಇಳಿದಿದ್ದಾರೆ. ಇದು ಅತ್ಯಂತ ದುಃಖಕರ ಘಟನೆ,” ಎಂದು ಜಿಲ್ಲಾಧಿಕಾರಿ ಹೇಳಿದರು.
ಮುತ್ತತ್ತಿಯಲ್ಲಿ ಮರುಕಳಿಸುತ್ತಿರುವ ದುರಂತಗಳು
ಕಳೆದ ಹಲವು ವರ್ಷಗಳಿಂದ ಇದೇ ಸ್ಥಳದಲ್ಲಿ ಇಂತಹ ಅಪಘಾತಗಳು ಮರುಕಳಿಸುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪೊಲೀಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪ್ರತಿ ವರ್ಷ ಸರಾಸರಿ ಐದರಿಂದ ಆರು ಮಂದಿ ಇದೇ ಪ್ರದೇಶದಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದ್ದರೂ ಪ್ರವಾಸಿಗರು ನಿರ್ಲಕ್ಷ್ಯ ವಹಿಸಿ ನದಿಗೆ ಇಳಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮರಣೋತ್ತರ ಪರೀಕ್ಷೆ ಪೂರ್ಣ
ಐವರ ಮೃತದೇಹಗಳನ್ನು ಮಂಡ್ಯದ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಶವಾಗಾರದ ಬಳಿ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸಂತೋಷದಿಂದ ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬ ಕೆಲವೇ ಗಂಟೆಗಳಲ್ಲಿ ಐದು ಸದಸ್ಯರನ್ನು ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.