ನಂದಿನಿ ಲೇಔಟ್ನಲ್ಲಿ ಭಾರಿ ಅಗ್ನಿ ಅವಘಡ: 50ಕ್ಕೂ ಹೆಚ್ಚು ಯುವತಿಯರ ಪವಾಡಸದೃಶ ಪಾರು
ಬೆಂಗಳೂರು: ನಂದಿನಿ ಲೇಔಟ್ ಪ್ರದೇಶದಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ದೊಡ್ಡ ದುರಂತ ತಪ್ಪಿದ್ದು, ಸುಮಾರು 50ಕ್ಕೂ ಹೆಚ್ಚು ಯುವತಿಯರು ಪವಾಡಸದೃಶವಾಗಿ ಪಾರಾದ ಘಟನೆ ನಡೆದಿದೆ.
ರಾತ್ರಿ ಸುಮಾರು 12:30ರ ಸುಮಾರಿಗೆ “ಬ್ಲೂ ಲೀಫ್” ಎಂಬ ಎಲ್ಇಡಿ ಡಿಸ್ಪ್ಲೇ ತಯಾರಿಕಾ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಟ್ಟಡವನ್ನು ಆವರಿಸಿತು. ಅಂಗಡಿಯ ಪಕ್ಕದಲ್ಲಿದ್ದ ನಾಲ್ಕಂತಸ್ತಿನ ಪಿಜಿ ಕಟ್ಟಡಕ್ಕೂ ಬೆಂಕಿ ವ್ಯಾಪಿಸಿದ್ದು, ಅಲ್ಲಿ ವಾಸಿಸುತ್ತಿದ್ದ ಯುವತಿಯರು ಭಾರೀ ಆತಂಕಕ್ಕೆ ಒಳಗಾದರು.
ಬೆಂಕಿ ತೀವ್ರಗೊಂಡ ಹಿನ್ನೆಲೆಯಲ್ಲಿ ಹೊರಬರುವ ದಾರಿ ಇಲ್ಲದ ಪರಿಸ್ಥಿತಿಯಲ್ಲಿ, ಕೆಲವರು ಮೇಲ್ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡರು. ಸ್ಥಳದಲ್ಲಿದ್ದ ದೃಶ್ಯಗಳು ಭಯಾನಕವಾಗಿದ್ದು, ಯುವತಿಯರು ಕಟ್ಟಡದಿಂದ ಜಿಗಿದು ಹೊರಬಂದು ರಸ್ತೆಗೆ ಓಡಿ ಬರುತ್ತಿರುವುದು ಕಂಡುಬಂದಿತು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ಎಲ್ಲರೂ ಜೀವಂತವಾಗಿ ಪಾರಾಗಿರುವುದು ಅದೃಷ್ಟಕರ ಸಂಗತಿ.
ಪಿಜಿ ಮಾಲೀಕರ ಮಾಹಿತಿ ಪ್ರಕಾರ, ಎಲ್ಲಾ ಯುವತಿಯರನ್ನೂ ಸಮಯಕ್ಕೆ ಎಬ್ಬಿಸಿ ಸುರಕ್ಷಿತವಾಗಿ ಹೊರತೆಗೆದಿರುವುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. “ಎಲ್ಲರೂ ಸುರಕ್ಷಿತರಾಗಿದ್ದಾರೆ, ದೇವರ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ,” ಎಂದು ಮಾಲೀಕರು ತಿಳಿಸಿದ್ದಾರೆ.


ಈ ಅಗ್ನಿ ಅವಘಡದಲ್ಲಿ ಎಲ್ಇಡಿ ಅಂಗಡಿಯಲ್ಲಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಬೊಲೇರೋ ವಾಹನಕ್ಕೂ ಬೆಂಕಿ ತಗುಲಿದ್ದು ಸಂಪೂರ್ಣ ಹಾನಿಯಾಗಿದೆ. ಸುಮಾರು ₹4 ಲಕ್ಷ ಮೌಲ್ಯದ ಎಲ್ಇಡಿ ಕಟ್ಔಟ್ ಕೂಡ ಬೆಂಕಿಗೆ ಆಹುತಿಯಾಗಿದೆ.
ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಹೆಚ್ಚಿನ ಹಾನಿ ತಪ್ಪಿಸಲಾಗಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿ ಅವಘಡದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಪಾರಾದ ಯುವತಿಯರನ್ನು ತಾತ್ಕಾಲಿಕವಾಗಿ ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಘಟನೆಯಿಂದ ಕಟ್ಟಡ ಹಾಗೂ ಅಂಗಡಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
