ಹಾಸನ, ಅ. 25: “ರಾಜ್ಯದ ಜನರಿಗೆ ಸುಖ, ಶಾಂತಿ, ನೆಮ್ಮದಿಯನ್ನು ತಾಯಿ ನೀಡಲಿ ಎಂದು ಸರ್ಕಾರದ ಪರವಾಗಿ ಪ್ರಾರ್ಥನೆ ಸಲ್ಲಿಸಲು ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಬಂದಿದ್ದೇನೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಕುಟುಂಬ ಸಮೇತರಾಗಿ ಹಾಸನದ ಹಾಸನಾಂಬ ದೇವಿಯ ದರ್ಶನದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು “ದುಃಖವನ್ನು ದೂರ ಮಾಡುವವಳು ದುರ್ಗಾ ಮಾತೆ. ಈ ತಾಯಿಯ ಆಶೀರ್ವಾದದಿಂದ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಜನರ ಜೀವನದಲ್ಲಿ ಬದಲಾವಣೆ, ಆರೋಗ್ಯ, ಐಶ್ವರ್ಯವನ್ನು ದೇವಿ ನೀಡಲಿ” ಎಂದರು.
ವಿಶೇಷ ಪ್ರಾರ್ಥನೆಯನ್ನು ಮಾಡಿದ್ದೀರಾ ಎಂದು ಕೇಳಿದಾಗ, “ನೀವು ನಾವು ನೆಮ್ಮದಿಯಿಂದ ಇರಬೇಕು. ಈ ವರ್ಷ ಮಳೆ ಬಂದ ರೀತಿಯಲ್ಲೇ ಪ್ರತಿ ವರ್ಷವೂ ಮಳೆ ಬರಲಿ, ಜನರಿಗೆ ಸುಖವನ್ನು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ” ಎಂದರು.
ಹಾಸನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉತ್ತಮವಾಗಿ ದೀಪಲಂಕಾರ, ಹೂವಿನ ಅಲಂಕಾರ ಸೇರಿದಂತೆ ದೇವಿಯ ದರ್ಶನಕ್ಕೆ ಉತ್ತಮ ವ್ಯವಸ್ಥೆ ಮಾಡಿದೆ. ಈ ವರ್ಷದ ದಸರಾ ಉತ್ಸವವನ್ನು ಸರ್ಕಾರ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿತ್ತು. ನಾಗರೀಕರಿಗೆ ಉತ್ತಮ ದರ್ಶನ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತಕ್ಕೆ ಅಭಿನಂದನೆಗಳು” ಎಂದರು.
ಸಿಂಹಾಸನದ ಬಗ್ಗೆ ಪ್ರಾರ್ಥನೆ ಮಾಡಲಿಲ್ಲವೇ ಎಂದು ಕೇಳಿದಾಗ, “ರಾಜ್ಯದ ಜನರಿಗೆ ಸಿಂಹಾಸನ ಸಿಗಲಿ” ಎಂದರು.
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕೇಳಿದಾಗ, “ಈ ಸಂದರ್ಭದಲ್ಲಿ ಚುನಾವಣೆ ವಿಚಾರ ಚರ್ಚೆ ಮಾಡುವುದು ಬೇಡ” ಎಂದರು.