ಬೆಂಗಳೂರು: ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ರಾಜ್ಯಕ್ಕೆ ಜಾಗತಿಕ ಹೂಡಿಕೆ ಆಕರ್ಷಿಸುವ ಪ್ರಯತ್ನದ ಜೊತೆಗೆ, ತಮ್ಮ ಸ್ವಜಿಲ್ಲೆ ವಿಜಯಪುರದ ಕೈಗಾರಿಕಾ ಸಾಧ್ಯತೆಗಳನ್ನು ಜಾಗತಿಕ ಕಂಪನಿಗಳ ಮುಂದೆ ಸ್ಪಷ್ಟವಾಗಿ ಪ್ರಸ್ತಾಪಿಸುವ ಮೂಲಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶೇಷ ಗಮನ ಸೆಳೆದಿದ್ದಾರೆ.
ಭಾರತದಲ್ಲಿ ಆಹಾರ ಸಂಸ್ಕರಣಾ ವಲಯದಲ್ಲಿ ಕೋಕಾ-ಕೋಲಾ ಹೂಡಿಕೆ ಮಾಡಲಿರುವ ₹25,760 ಕೋಟಿ ಬಂಡವಾಳದಲ್ಲಿ ಗಮನಾರ್ಹ ಮೊತ್ತವನ್ನು ಕರ್ನಾಟಕಕ್ಕೆ—ಅದರಲ್ಲೂ ವಿಜಯಪುರ ಜಿಲ್ಲೆಗೆ—ಸೆಳೆಯುವ ಉದ್ದೇಶದಿಂದ ಸಚಿವರು ದಾವೋಸ್ನಲ್ಲಿ ಗಂಭೀರ ಪ್ರಯತ್ನ ನಡೆಸಿದ್ದಾರೆ.
ವಿಶ್ವ ಆರ್ಥಿಕ ಸಮಾವೇಶದ ಮೊದಲ ದಿನ ಕೋಕಾ-ಕೋಲಾ ಕಂಪನಿಯ ಜಾಗತಿಕ ನೀತಿ ಮತ್ತು ಸುಸ್ಥಿರತೆಯ ಹಿರಿಯ ಉಪಾಧ್ಯಕ್ಷ ಮೈಕಲ್ ಗೋಲ್ಟ್ಜಮನ್ ಅವರೊಂದಿಗೆ ನಡೆದ ಸಭೆಯಲ್ಲಿ, ಕರ್ನಾಟಕ—ವಿಶೇಷವಾಗಿ ವಿಜಯಪುರ ಜಿಲ್ಲೆ—ಪಾನೀಯ ತಯಾರಿಕೆ ಹಾಗೂ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅತ್ಯಂತ ಸೂಕ್ತ ತಾಣ ಎಂದು ಸಚಿವರು ಮನವರಿಕೆ ಮಾಡಿದ್ದಾರೆ.
ಸ್ವಜಿಲ್ಲೆಯ ಮೂಲಸೌಕರ್ಯಗಳನ್ನು ಮುಂದಿಟ್ಟ ಸಚಿವರು
ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಬಳಕೆಗೆ ಅಗತ್ಯವಿರುವ ನೀರು ಸುಸ್ಥಿರವಾಗಿ ಲಭ್ಯವಿರುವುದು, ಕೃಷಿ ಆಧಾರಿತ ಕಚ್ಚಾ ವಸ್ತುಗಳ ಸಮೃದ್ಧತೆ ಮತ್ತು ಭೌಗೋಳಿಕ ಅನುಕೂಲತೆಗಳನ್ನೂ ಕಂಪನಿಯ ಗಮನಕ್ಕೆ ತರಲಾಗಿದೆ. ಹೀಗಾಗಿ ಹೂಡಿಕೆ ನಿರ್ಧಾರದಲ್ಲಿ ಈ ಜಿಲ್ಲೆಗೆ ಆದ್ಯತೆ ನೀಡುವಂತೆ ಸಚಿವರು ಒತ್ತಾಯಿಸಿದ್ದಾರೆ.
ದಾವೋಸ್ನಲ್ಲಿ ಕರ್ನಾಟಕದ ಕೈಗಾರಿಕಾ ಶಕ್ತಿ ಪ್ರದರ್ಶನ
ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ದೇಶ-ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ, ರಾಜ್ಯದಲ್ಲಿ ಉದ್ಯಮ ಸ್ಥಾಪನೆ, ವಿಸ್ತರಣೆ ಹಾಗೂ ಬಂಡವಾಳ ಹೂಡಿಕೆಗಾಗಿ ಸರ್ಕಾರ ನೀಡುತ್ತಿರುವ ಸಬ್ಸಿಡಿ ಮತ್ತು ಉತ್ತೇಜನಾ ಕ್ರಮಗಳನ್ನು ವಿವರಿಸಿದೆ.
ಮೆಂಜಿಸ್ ಏವಿಯೇಷನ್, ಯುಪಿಎಲ್ ಲಿಮಿಟೆಡ್, ಎಬಿ ಇನ್ಬೆವ್, ಟಾಟಾ ಸನ್ಸ್ ಮತ್ತು ನ್ಯಾಚುರಲ್ ಫೈಬರ್ ವೆಲ್ಡಿಂಗ್ (ಎನ್ಎಫ್ಡಬ್ಲ್ಯು ಅರ್ಥ್) ಸೇರಿದಂತೆ ಹಲವು ಕಂಪನಿಗಳೊಂದಿಗೆ ನಡೆದ ಮಾತುಕತೆಗಳಲ್ಲಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಹೂಡಿಕೆ ಸಾಧ್ಯತೆಗಳ ಮೇಲೆ ಸಚಿವರು ವಿಶೇಷ ಒತ್ತು ನೀಡಿದರು.
ಎಥೆನಾಲ್ ಮತ್ತು ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಚರ್ಚೆ
ಯುಪಿಎಲ್ ಲಿಮಿಟೆಡ್ ರಾಜ್ಯದಲ್ಲಿ ಕೃಷಿ ಪರಿಹಾರ ಮತ್ತು ನೀರಾವರಿ ತಂತ್ರಜ್ಞಾನಗಳಲ್ಲಿ ತನ್ನ ವಹಿವಾಟು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ರಫ್ತು ಉದ್ದೇಶಕ್ಕೆ ಮೆಕ್ಕೆಜೋಳ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಎಥೆನಾಲ್ ಸ್ಥಾವರ ನಿರ್ಮಾಣದ ಸಾಧ್ಯತೆಗಳನ್ನೂ ಚರ್ಚಿಸಲಾಗಿದೆ.
ಎಬಿ ಇನ್ಬೆವ್ ಸಂಸ್ಥೆ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಸ್ಪಷ್ಟ ಇಂಗಿತ ನೀಡಿದ್ದು, ನ್ಯಾಚುರಲ್ ಫೈಬರ್ ವೆಲ್ಡಿಂಗ್ ಸಂಸ್ಥೆ ಸರ್ಕಾರದೊಂದಿಗೆ ಯೋಜನಾ ಪ್ರಸ್ತಾವ ಹಂಚಿಕೊಳ್ಳುವುದಾಗಿ ಭರವಸೆ ನೀಡಿದೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬಿಡಿಎ ಆಯುಕ್ತ ಮಣಿವಣ್ಣನ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಹಾಗೂ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ರಾಜ್ಯದ ನಿಯೋಗದಲ್ಲಿದ್ದರು.
