ಬೆಂಗಳೂರು, ಜನವರಿ 20: ಬಿಎಂಟಿಸಿ ಬಸ್ಗಳಲ್ಲಿ ಯುಪಿಐ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಮೂವರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಪ್ರಕಟಿಸಿದೆ.
ಡಿಸೆಂಬರ್ 2025ರಲ್ಲಿ ನಡೆದ ನಿಯಮಿತ ಪರಿಶೀಲನೆಯ ವೇಳೆ, ಸಂಬಂಧಿಸಿದ ಸಿಬ್ಬಂದಿ ಅಧಿಕೃತ ಬಿಎಂಟಿಸಿ ಯುಪಿಐ ಸ್ಕ್ಯಾನರ್ ಬಳಸದೆಯೇ, ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್ಗಳ ಮೂಲಕ ಪ್ರಯಾಣಿಕರಿಂದ ಹಣ ಸಂಗ್ರಹಿಸುತ್ತಿರುವುದು ಪತ್ತೆಯಾಗಿದೆ. ಇದು ಬಿಎಂಟಿಸಿ ಹಣಕಾಸು ನಿಯಮಗಳು ಹಾಗೂ ಟಿಕೆಟ್ ಪ್ರಕ್ರಿಯೆಗಳ ಗಂಭೀರ ಉಲ್ಲಂಘನೆಯಾಗಿದೆ.
ವಿಸ್ತೃತ ತನಿಖೆಯ ಬಳಿಕ ಆರೋಪಗಳು ಸಾಬೀತಾಗಿದ್ದು, ಮುಂದಿನ ವಿಚಾರಣೆಯ ತನಕ ಸಿಬ್ಬಂದಿಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಸಿಬ್ಬಂದಿ ವಿವರ
ಉತ್ತರ ಪೂರ್ವ ಹಾಗೂ ದಕ್ಷಿಣ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯಿಂದ ₹3,206 ರಿಂದ ₹54,358 ವರೆಗೆ ಹಣ ದಾರಿ ತಪ್ಪಿದ್ದು, ಒಟ್ಟು ಮೊತ್ತ ₹1.05 ಲಕ್ಷಕ್ಕೂ ಅಧಿಕವಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ಮುನ್ನೆಚ್ಚರಿಕಾ ಕ್ರಮ
ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಡೆಪೋ ವ್ಯವಸ್ಥಾಪಕರಿಗೆ ಅಧಿಕೃತ ಯುಪಿಐ ಸ್ಕ್ಯಾನರ್ ಬಳಕೆ ಕಡ್ಡಾಯಗೊಳಿಸುವಂತೆ ಸೂಚಿಸಲಾಗಿದೆ.
ಇದಕ್ಕೂ ಮೇರಿಯಾಗಿ, ಬಿಎಂಟಿಸಿ ಶೀಘ್ರದಲ್ಲೇ ಡೈನಾಮಿಕ್ ಕ್ಯೂಆರ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ತರುವುದಾಗಿ ಘೋಷಿಸಿದ್ದು, ಇದು ಪಾರದರ್ಶಕತೆ, ಭದ್ರತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುವ ನಿರೀಕ್ಷೆಯಿದೆ.
ಭವಿಷ್ಯದಲ್ಲಿ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರು ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
