ಬೆಂಗಳೂರು:
ಮಲಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಸವದತ್ತಿ ತಾಲ್ಲೂಕಿನ ಏಣಗಿ-ಹಳೆ ಏಣಗಿ ಮಲ್ಲೂರು-ಜಾಕವೆಲ್ ರಸ್ತೆ, ಬಡ್ಲಿ-ಹಳೇ ಬಡ್ಲಿ, ಸುತಗಟ್ಟಿ-ಹಿಟ್ಟಣಗಿ-ಏಣಗಿ ರಸ್ತೆಗಳ ದುರಸ್ತಿಗಾಗಿ ಕರ್ನಾಟಕ ನೀರಾವರಿ ನಿಗಮದಿಂದ ಅಂದಾಜು ಪತ್ರಿಕೆಯನ್ನು ತಯಾರಿಸಲಾಗುತ್ತಿದ್ದು, ಆದಷ್ಟೂ ಬೇಗ ಮಂಜೂರಾತಿ ಕೊಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಶ್ರೀ ಗೋವಿಂದ ಎಂ. ಕಾರಜೋಳರವರು ವಿಧಾನಸಭೆಗೆ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಇಂದು ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿಯವರ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರಿಸಿದರು. ಏಣಗಿ-ಹಳೆ ಏಣಗಿ ಗ್ರಾಮದವರೆಗಿನ ೬.೦೦ ಕಿ.ಮೀ ಉದ್ದದ ರಸ್ತೆಗೆ ಈಗಾಗಲೇ ೩೦೯ ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಆದಷ್ಟೂ ಬೇಗ ಆಡಳಿತಾತ್ಮಕ ಮಂಜೂರಾತಿ ನೀಡಲಾಗುವುದೆಂದು ಮಾನ್ಯ ಸಚಿವರು ತಿಳಿಸಿದರು.
ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ ಬೈಲ ಹೊಂಗಲ ತಾಲ್ಲೂಕಿನ ೧೫ ಗ್ರಾಮಗಳು ಹಾಗೂ ಸವದತ್ತಿ ತಾಲ್ಲೂಕಿನ ೧೨ ಗ್ರಾಮಗಳು ಮಲಪ್ರಭಾ ಯೋಜನೆಯ ಮುಳುಗಡೆ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಈ ಪುನರ್ ವಸತಿ ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರದೇಶವು ಕಪ್ಪು ಮಣ್ಣಿನಿಂದ ಕೂಡಿದ್ದು, ಈ ಕಪ್ಪು ಮಿಶ್ರಿತ ಮಣ್ಣಿನಿಂದ ಕೂಡಿದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆAದು ಸಚಿವರು ವಿವರಿಸಿದರು. ಈ ಎಲ್ಲಾ ರಸ್ತೆಗಳ ದುರಸ್ತಿಗೆ ಮಂಜೂರಾತಿ ನೀಡಲಗುವುದೆಂದು ತಿಳಿಸಿದರು.