ಬೆಂಗಳೂರು, ಮಾರ್ಚ್ 19: ನಮ್ಮ ಮೆಟ್ರೋ ರೈಲಿನಲ್ಲಿ ಹಾಡು ಹಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಮೆಟ್ರೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಭಾನುವಾರ ರಾತ್ರಿ, ಮೆಟ್ರೋದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಯುವತಿಯರ ಗುಂಪೊಂದು ಜೋರಾಗಿ ಹಾಡು ಹಾಡಿ ನೃತ್ಯ ಮಾಡಿತ್ತು. ಇದರಿಂದ ಇತರ ಪ್ರಯಾಣಿಕರಿಗೆ ಅಸೌಕರ್ಯ ಉಂಟಾಗಿದ್ದು, ಕೆಲವು ಯುವತಿಯರು ಮೆಟ್ರೋ ಬೋಗಿಯ ನೆಲದ ಮೇಲೆ ಕುಳಿತು ಹಾಡು ಹಾಡಿದ ದೃಶ್ಯವು ವೈರಲ್ ಆಗಿತ್ತು. ಈ ವರ್ತನೆಯ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಸಿಬ್ಬಂದಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಪೀಣ್ಯ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ (Non-Cognizable Report) ದಾಖಲಿಸಲಾಗಿದೆ. ಮೆಟ್ರೋ ಆವರಣದಲ್ಲಿ ಸಾರ್ವಜನಿಕ ಸೌಕರ್ಯಗಳಿಗೆ ಧಕ್ಕೆ ತರುವ ಇಂತಹ ವರ್ತನೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
