ಕೊಪ್ಪಳ/ಬೆಂಗಳೂರು: ಸಚಿವ ನಾಗೇಂದ್ರ ಆಪ್ತನಿಗೆ SIT ಬಿಗ್ ಶಾಕ್ ನೀಡಿದ್ದು, ನೆಕ್ಕಂಟಿ ನಾಗರಾಜ್ ಅರೆಸ್ಟ್ ಮಾಡಲಾಗಿದೆ.
ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್‌ನಲ್ಲಿ ಹಲವರ ಹೆಸರು ಪ್ರಸ್ತಾಪಿಸಿದ್ದರು. ಸಚಿವರ ಗಮನಕ್ಕೆ ಬಂದೇ ಹಣ ವರ್ಗಾವಣೆ ಆಗಿದೆ ಎಂಬ ಅರ್ಥದಲ್ಲಿ ಚಂದ್ರಶೇಖರನ್ ಪರೋಕ್ಷವಾಗಿ ಸಚಿವ ನಾಗೇಂದ್ರ ಹೆಸರು ಉಲ್ಲೇಖಿಸಿದ್ದರು. ಇದೇ ಕಾರಣಕ್ಕೆ ಸಚಿವರ ರಾಜೀನಾಮೆಗೆ ಬಿಜೆಪಿ, ಜೆಡಿಎಸ್ ಆಗ್ರಹಿಸಿತ್ತು. ಖುದ್ದು ಚಂದ್ರಶೇಖರನ್ ಕುಟುಂಬಸ್ಥರೇ ಸಚಿವ ನಾಗೇಂದ್ರರತ್ತ ಬೊಟ್ಟು ಮಾಡಿದ್ದರು. ಇದೀಗ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಎಂಬುವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಎಸ್‌ಐಟಿ ವಶಕ್ಕೆ ಪಡೆದಿರುವ ನೆಕ್ಕಂಟಿ ನಾಗರಾಜ ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮರ್ಲಾನ ಹಳ್ಳಿಯವ. ಈ ಮೊದಲು ಮಾಜಿ ಸಚಿವ ಶ್ರೀರಾಮುಲು ಆಪ್ತರಾಗಿದ್ದ ನೆಕ್ಕಂಟಿ, 2013ರಲ್ಲಿ ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್‌ಆರ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎನ್ನಲಾಗಿದೆ.
ಈತ ಈ ಹಿಂದೆ ಕೊಪ್ಪಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ. ಆದರೆ ಸೋಲು ಅನುಭವಿಸಿದ್ದ. ಬಳಿಕ ಸಚಿವ ನಾಗೇಂದ್ರರ ಖಾಸಗಿ ಪಿಎ ಆಗಿದ್ದ ಎನ್ನಲಾಗಿದೆ. ನೆಕ್ಕಂಟಿ ನಾಗರಾಜ ಸಾಕಷ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪವಿದೆ.