Home ಬೆಂಗಳೂರು ನಗರ ಅತ್ಯಂತ ಸರಳ ಸಜ್ಜನಿಕೆಯ ನ್ಯಾಯಾಧೀಶರು: ಮೋಹನ್ ಎಂ. ಶಾಂತನಗೌಡರ್

ಅತ್ಯಂತ ಸರಳ ಸಜ್ಜನಿಕೆಯ ನ್ಯಾಯಾಧೀಶರು: ಮೋಹನ್ ಎಂ. ಶಾಂತನಗೌಡರ್

10
0
Mohan M. Shantanagoudar -- most simple outfit judge

ಬೆಂಗಳೂರು:

ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಧಾವೆ ಊಡಿದವರ ಮಾತೃ ಭಾಷೆಯಲ್ಲಿ ಹಾಗೂ ಸ್ಥಳೀಯ ಭಾಷೆಗಳಲ್ಲಿ ನೀಡುವುದು ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರಾಗಿದ್ದ ದಿವಂಗತ ಮೋಹನ್ ಎಂ. ಶಾಂತನಗೌಡರ್ ಅವರ ಅಭಿಲಾಷೆಯಾಗಿತ್ತು ಎಂದು ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ನ್ಯಾಯಮೂರ್ತಿ ದಿವಂಗತ ಮೋಹನ್ ಎಂ. ಶಾಂತನಗೌಡರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಮೋಹನ್ ಎಂ. ಶಾಂತನಗೌಡರ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಯಾವಾಗಲೂ ಸಾಮಾನ್ಯ ವ್ಯಕ್ತಿಗಳ ಪರ ಚಿಂತನೆಯುಳ್ಳ ಅತ್ಯುತ್ತಮ ನ್ಯಾಯಾಧೀಶರಾಗಿದ್ದರು ಎಂದು ಹೇಳಿದರು.

ಉತ್ತರ ಕರ್ನಾಟಕದ ಹಳ್ಳಿಯೊಂದರಿಂದ ಬೆಳೆದು ಬಂದ ಗೌಡರು ಸ್ಥಳೀಯ ನ್ಯಾಯಾಲಯಗಳಿಂದ ಹಿಡಿದು ದೇಶದ ಅತ್ಯುನ್ನತ ನ್ಯಾಯಾಲಯದವರೆಗೂ ಮಾನವ ಸಂಬಂಧಗಳನ್ನು ಉಳಿಸಿಕೊಂಡಿದ್ದರು ಹಾಗೂ ಪ್ರತಿ ಕ್ಷಣವೂ ನ್ಯಾಯಾಲಯದ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸುವ ಮತ್ತು ಜನಸಾಮಾನ್ಯರ ಸ್ನೇಹಮಯಿ ನ್ಯಾಯಾಲಯಗಳನ್ನು ರೂಪಿಸುವ ಚಿಂತನೆಯಲ್ಲಿ ತೊಡಗಿದ್ದವರು.

ಗೌಡರ ಸರಳ ವ್ಯಕ್ತಿತ್ವವನ್ನು ಖ್ಯಾತ ಕವಿ ಡಿ.ವಿ.ಗುಂಡಪ್ಪನವರ ‘ಹುಲ್ಲಾಗು ಬೆಟ್ಟದಡಿ’ ಕಗ್ಗವನ್ನು ಹೇಳಿದ ಅವರು, ಕಳೆದ ಒಂದೂವರೆ ವರ್ಷಗಳ ಕಾಲ ಸುಪ್ರೀಂಕೋರ್ಟ್‍ನಲ್ಲಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡು ಸ್ವಲ್ಪ ಭಾವುಕರಾದರು. ಅವರ ಮತ್ತು ತಮ್ಮ ನಡುವಿನ ಆಧ್ಯಾತ್ಮಿಕ ಅನುಭವಗಳನ್ನು ಹಂಚುಕೊಂಡ ಅವರು ಗೌಡರ ನೆನಪಿನಾರ್ಥವಾಗಿ ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಯೋಜನೆಯನ್ನು ರೂಪಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು ಮಾತನಾಡಿ, ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಅತ್ಯುತ್ತಮ ನ್ಯಾಯಾಧೀಶರನ್ನು ಕೊಡುಗೆ ನೀಡಿದ ಶ್ರೇಯಸ್ಸು ನಮ್ಮ ಕರ್ನಾಟಕ ನ್ಯಾಯಾಂಗ ವ್ಯವಸ್ಥೆಗೆ ಸಲ್ಲುತ್ತದೆ. ದಿವಂಗತ ಮೋಹನ್ ಎಂ. ಶಾಂತನಗೌಡರ್ ಅವರ ಜೊತೆ ಬಾಲ್ಯದಿಂದಲೂ ಒಡನಾಟವಿದ್ದು, ನಮ್ಮ ತಂದೆ ಹಾಗೂ ಅವರ ತಂದೆ ಸ್ನೇಹಿತರಾಗಿದ್ದವರು. ಅತ್ಯಂತ ಸರಳ ಹಾಗೂ ಅತ್ಯುತ್ತಮ ನ್ಯಾಯಾಂಗ ಜ್ಞಾನವನ್ನು ಹೊಂದಿದ್ದ ಮಾನವೀಯ ಗುಣಗಳ ಗೌಡರು ಯುವ ವಕೀಲರುಗಳಿಗೆ ಮಾರ್ಗದರ್ಶಕರಾಗಿದ್ದರು
.
ಯಾವಾಗಲೂ ತಮ್ಮನ್ನು ಯುವ ವಕೀಲರು ಹಾಗೂ ನ್ಯಾಯಾಧೀಶರುಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ನಂತರ ಸಹ ಅವರ ವ್ಯಕ್ತಿತ್ವದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ ಹಾಗೂ ಅವರೊಬ್ಬ ತನ್ನ ಮಣ್ಣಿಗಂಟಿದ ಬೇರಾಗಿದ್ದರು.

ಅವರ ಹೆಸರನ್ನು ಕರ್ನಾಟಕ ನ್ಯಾಯಾಂಗ ವ್ಯವಸ್ಥೆಯಲ್ಲಿ ನೆನಪಿನಲ್ಲಿರುವಂತೆ ಸರ್ಕಾರದಿಂದ ಯೋಜನೆಯನ್ನು ರೂಪಿಸಲು ಚಿಂತಿಸಲಾಗುವುದು. ಸಾಧಕನಿಗೆ ಸಾವಿಲ್ಲ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಸ್ಮರಿಸುವ ಮೂಲಕ ಗೌಡರಿಗೆ ನಮನ ಸಲ್ಲಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಮಾಧುಸ್ವಾಮಿ ಅವರು ಮಾತನಾಡಿ, ಮೋಹನ್ ಎಂ. ಶಾಂತನಗೌಡರ್ ಅವರು ಅತ್ಯಂತ ಸಹೃದಯಿ ಮನಸ್ಸನ್ನು ಹೊಂದಿದ್ದರು. ಅವರ ಜೊತೆಗಿನ ತಮ್ಮ ಒಡನಾಟದ ಅನುಭವಗಳನ್ನು ನೆನಪಿಸಿಕೊಂಡರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಾದ ಶ್ರೀಮತಿ ಬಿ.ವಿ.ನಾಗರತ್ನ, ಅಭಯ್ ಶ್ರೀನಿವಾಸ ಓಕಾ, ಎ.ಎಸ್. ಬೋಪಣ್ಣ, ಎಸ್. ಅಬ್ದುಲ್ ನಜೀರ್, ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶÀರ್ಮ ಮತ್ತು ಕರ್ನಾಟಕ ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ ನಾವಡ್ಗಿ ಸೇರಿದಂತೆ ಕನಾಟಕ ರಾಜ್ಯ ವಕೀಲರ ಪರಿಷತ್ತಿನ ಮುಖಂಡರುಗಳು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಮೋಹನ್ ಎಂ. ಶಾಂತನಗೌಡರ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಇದೇ ಸಂದರ್ಭದಲ್ಲಿ ಗೌಡರ ಕುರಿತು ಪರಿಷತ್ತು ನಿರ್ಮಿಸಿದ್ದ ಕಿರುಚಿತ್ರವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು.

LEAVE A REPLY

Please enter your comment!
Please enter your name here