Mysuru | Man Sentenced to 20 Years in Prison for Sexual Assaulting Specially-Abled Girl
ಮೈಸೂರು:
ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಮೈಸೂರಿನ ಫೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೈಸೂರು ತಾಲೂಕಿನ ಗ್ರಾಮವೊಂದರ ನಿವಾಸಿ ಶಿಕ್ಷೆಗೊಳಗಾದ ವ್ಯಕ್ತಿ. ಆರೋಪಿಯು ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ಮೈಸೂರು ದಕ್ಷಿಣ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೈಮ ಖರ್ಮೋಜ್ ಅವರು, ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ಸಂತ್ರಸ್ತೆಗೆ 1,05,000 ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ.
ನೊಂದ ಬಾಲಕಿ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರ ಪಡೆಯಲು ಅರ್ಹಳು ಎಂದು ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ವಾದ ಮಂಡಿಸಿದ್ದರು.
