ಬೆಂಗಳೂರು:
ಮತಾಂತರ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಸ್ವಾಗತಿಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಸಚಿವ ಸಂಪುಟವನ್ನು ಅಭಿನಂದಿಸಿದ್ದಾರೆ.
ಯಾವುದೇ ನಿಗದಿತ ಧರ್ಮವನ್ನು ಗುರಿಯಾಗಿಸಿ ಮಾಡಿದ ಕಾಯ್ದೆ ಇದಲ್ಲ. ಆದರೆ, ಆಮಿಷ, ಉಡುಗೊರೆ, ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದನ್ನು ಇದು ತಡೆಯಲಿದೆ. ಈ ಕಾಯ್ದೆಯಲ್ಲಿ ಯಾವುದೇ ನಿರ್ದಿಷ್ಟ ಸಮುದಾಯದ ಬಗ್ಗೆ ಉಲ್ಲೇಖ ಇಲ್ಲ ಎಂದು ತಿಳಿಸಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ, ನಂಬಿಕೆ ಹಾಗೂ ಭಾವನೆಗೆ ಗೌರವ ಕೊಡುವ ಕಾಯ್ದೆ ಇದಾಗಿದೆ. ಈ ಕಾಯ್ದೆಯಡಿ ಧರ್ಮ ಪ್ರಚಾರಕ್ಕೆ ಅಡ್ಡಿ ಇಲ್ಲ. ಕಾಂಗ್ರೆಸ್ ಪಕ್ಷವು ಇದ್ಯಾವುದನ್ನೂ ಗಮನಿಸದೆ ವಿರೋಧಕ್ಕಾಗಿ ವಿರೋಧಿಸುವ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಈ ಹಿಂದೆ ಮತಾಂತರ ನಿಯಂತ್ರಣ ಕಾಯ್ದೆ ಜಾರಿ ಬಗ್ಗೆ ಭರವಸೆ ನೀಡಿತ್ತು. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಈಗ ಕಾಯ್ದೆ ಅನುಷ್ಠಾನಕ್ಕೆ ತರುತ್ತಿದ್ದು, ನುಡಿದಂತೆ ನಡೆವ ಸರಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.