Home ಬೆಂಗಳೂರು ನಗರ ಮುಂದಿನ ತಿಂಗಳಿನಿಂದ ಬೆಂಗಳೂರಿನ 243 ವಾರ್ಡ್‍ಗಳಲ್ಲಿ ‘ನಮ್ಮ ಕ್ಲೀನಿಕ್’ ಸೇವೆ ಪ್ರಾರಂಭ : ಮುಖ್ಯಮಂತ್ರಿ ಬಸವರಾಜ...

ಮುಂದಿನ ತಿಂಗಳಿನಿಂದ ಬೆಂಗಳೂರಿನ 243 ವಾರ್ಡ್‍ಗಳಲ್ಲಿ ‘ನಮ್ಮ ಕ್ಲೀನಿಕ್’ ಸೇವೆ ಪ್ರಾರಂಭ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

42
0
'Namma Clinic' services would be launched in 243 wards of Bengaluru next month, says CM Bommai

ಬೆಂಗಳೂರು:

ಮುಂದಿನ ತಿಂಗಳಿನಿಂದ ಬೆಂಗಳೂರಿನ 243 ವಾರ್ಡ್‍ಗಳಲ್ಲಿ ‘ನಮ್ಮ ಕ್ಲೀನಿಕ್’ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ “ ಬಸವಧಾಮ ಉದ್ಯಾನವನ” ಉದ್ಘಾಟನೆ, “ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ”, “ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಉದ್ಯಾನವನ ಉದ್ಘಾಟನೆ” “ ಭೋವಿ ಪಾಳ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳ ಹಕ್ಕುಪತ್ರ ವಿತರಣೆ” ಹಾಗೂ ಮುಖ್ಯಮಂತ್ರಿಗಳ ನವ-ನಗರೋತ್ಥಾನ ಯೋಜನೆಯಡಿ ಮಹಾಲಕ್ಷ್ಮೀಲೇಔಟ್ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ “ ಹೊರವರ್ತುಲ ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆಗೆ ಮೇಲುಸೇತುವೆ ನಿರ್ಮಾಣ ಕಾಮಗಾರಿ”ಗೆ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಬಡಜನರಿಗೆ ತಮ್ಮ ವಾರ್ಡ್‍ನಲ್ಲಿಯೇ ನಮ್ಮ ಕ್ಲೀನಿಕ್ ಮೂಲಕ ಆರೋಗ್ಯ ಸೌಲಭ್ಯ ನೀಡುವ ಉತ್ತಮ ಯೋಜನೆಯಾಗಿದೆ. ಬೆಂಗಳೂರಿನಲ್ಲಿ ಆರೋಗ್ಯ, ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ. ಅಮೃತ ಯೋಜನೆಯಲ್ಲಿ 75 ಕೆರೆಗಳ ಅಭಿವೃದ್ಧಿ, 20 ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪಣ ತೊಡಲಾಗಿದೆ. ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ 11 ಕಿ.ಮೀ. ರಸ್ತೆ ಕಾಮಗಾರಿಯಿಂದ ಹಲವಾರು ಜಂಕ್ಷನ್‍ಗಳಲ್ಲಿ ವಾಹನ ದಟ್ಟಣೆ ಶೇ.40 ರಷ್ಟು ಕಡಿಮೆಯಾಗುತ್ತದೆ. ಇದಕ್ಕಾಗಿ 55 ಕೋಟಿ ರೂ. ನೀಡಲಾಗಿದ್ದು, ಜನಸಾಮಾನ್ಯರ ಉಪಯೋಗಕ್ಕೆ ಈ ಯೋಜನೆ ಆದಷ್ಟು ಬೇಗ ಸಮರ್ಪಣೆಯಾಗಲಿದೆ ಎಂದರು.

ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳಿಗೆ ಸೂಚನೆ :

ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಸವಧಾಮ ಉದ್ಯಾನವನ, ಬಸವಣ್ಣ, ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಅವರ ಮೂರ್ತಿ ಅನಾವರಣ ಮತ್ತು ದಿ.ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ವಾರ್ಡ್ ನಾಮಕರಣ ಮಾಡಿರುವ ಇಂದು ಪುಣ್ಯದ ದಿನ. ಬೆಂಗಳೂರು ನಗರ ಬೃಹತ್ತಾಗಿ ಬೆಳೆಯುತ್ತಿದೆ. ನೂರಮೂವತ್ತು ಲಕ್ಷ ಜನಸಂಖ್ಯೆ ಇದ್ದು, ಅಷ್ಟೇ ಸಂಖ್ಯೆಯ ವಾಹನಗಳಿವೆ. ದೊಡ್ಡ ಪ್ರಮಾಣದಲ್ಲಿ ಐಟಿಬಿಟಿ, ಔದ್ಯೋಗೀಕರಣ ಅಭಿವೃದ್ಧಿ ಕಂಡಿದೆ. ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿ ಬೆಳೆಯುತ್ತಿದೆ. ನಗರದಲ್ಲಿ ಜನರಿಗೆ ಸೌಲಭ್ಯಗಳನ್ನು ನೀಡುವುದು ಬಹಳ ಮುಖ್ಯ. ಉತ್ತಮ ಮೂಲಭೂತಸೌಕರ್ಯಗಳು ಪ್ರತಿಯೊಬ್ಬ ನಾಗರಿಕರಿಗೆ ದೊರಕಬೇಕಿರುವುದು ಬಹಳ ಮುಖ್ಯ. ನಾನು ಮುಖ್ಯಮಂತ್ರಿಯಾದ ತಕ್ಷಣ, ಬೆಂಗಳೂರಿನ ಅಭಿವೃದ್ಧಿಗಾಗಿ ‘ಅಮೃತ ನಗರೋತ್ಥಾನ ಯೋಜನೆ’ ಯಡಿ 6000 ಕೋಟಿ ರೂ.ಗಳನ್ನು ಒದಗಿಸಿದೆ. ಮಳೆಪರಿಸ್ಥಿತಿಯನ್ನು ನಿಭಾಯಿಸಲು 400 ಕಿ.ಮೀ.ಗಳ ರಾಜಕಾಲುವೆಗಳ ಅಭಿವೃದ್ಧಿಗಾಗಿ 1600 ಕೋಟಿ ರೂ.ಗಳನ್ನು ಒದಗಿಸಿದೆ. ಬೆಂಗಳೂರಿನ ಮೂಲಭೂತಸೌಕರ್ಯಗಳಿಗೆ ಹಣದ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ದೂರದೃಷ್ಟಿಯ ಹಲವಾರು ಕಾರ್ಯಕ್ರಮಗಳಾದ ಮೆಟ್ರೋ ವಿಸ್ತರಣೆ ಕಾರ್ಯವನ್ನು 2025ರ ಬದಲಾಗಿ 2024ರಲ್ಲೇ ಪೂರ್ಣಗೊಳಿಸಲಾಗುವುದು. ಬೆಂಗಳೂರು ನಗರದ ಹೊರ ವಲಯವನ್ನು ಸಂಪರ್ಕಿಸುವ 3ನೇ ಫೇಸ್ ಮೆಟ್ರೋ ಕಾರ್ಯವನ್ನು ಮುಂದಿನ ವರ್ಷ ಪ್ರಾರಂಭಿಸಲಾಗುವುದು. 15000 ಕೋಟಿ ರೂ. ವೆಚ್ಚದಲ್ಲಿ ಸಬ್‍ಅರ್ಬನ್ ರೈಲ್ವೆ ಯೋಜನೆಗೆ ಚಾಲನೆ ನೀಡಲಾಗಿದೆ. ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಯನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Also Read: ‘Namma Clinic’ services would be launched in 243 wards of Bengaluru next month, says CM Bommai

ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಜನಪ್ರತಿನಿಧಿಗಳು :

ಈ ಪ್ರದೇಶದ ಜನನಾಯಕರು ಕ್ರಿಯಾಶೀಲ ಸಚಿವರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿಯೂ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಮಾನವೀಯ ನಾಯಕರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸಿದ್ದಾರೆ. ಬೆಂಗಳೂರಿನ ಬಿಬಿಎಂಪಿಯಲ್ಲಿ ಪ್ರತಿ ವಾರ್ಡ್‍ನಲ್ಲಿ ಜನ ಪ್ರತಿನಿಧಿಗಳಿರಬೇಕು. ಆಗ ಕೆಲಸಗಳಾಗುತ್ತವೆ. ಬಿಬಿಎಂಪಿ ಚುನಾವಣೆಗೆ ಸಿದ್ಧತೆಗಳನ್ನು ಮಾಡಲಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆ ನಿರಂತರವಾಗಿ ನಡೆಯಲು ಜನನಾಯಕರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಗೋಪಾಲಯ್ಯ, ಬೈರತಿ ಬಸವರಾಜ, ಮುನಿರತ್ನ, ನಗರಾಭಿವೃದ್ಧಿ ಇಲಾಖೆ ಎಸಿಎಸ್ ರಾಕೇಶ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here