“ಅಮೆರಿಕಾ ರಸ್ತೆಗಳು, ಅಮೆರಿಕ ದೇಶ ಶ್ರೀಮಂತ ಎಂದು ಚನ್ನಾಗಿರುವುದಲ್ಲಾ. ಅಮೆರಿಕಾ ರಸ್ತೆಗಳು ಚನ್ನಾಗಿರುವುದರಿಂದ, ಅಮೆರಿಕಾ ಶ್ರೀಮಂತವಾಗಿದೆ”. ಜಾನ್ ಎಫ್ ಕೆನಡಿ ಹೇಳಿಕೆ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಆಗ್ಗಾಗ್ಗೆ ನೆನಪಿಸುತ್ತಿರುತ್ತಾರೆ.
ಭಾರತದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವು ಕಳೆದ ಎಂಟು ವರ್ಷದಲ್ಲಿ ಶರವೇಗದಲ್ಲಿ ನಿರ್ಮಾಣವಾಗಿ ಅಧ್ಭುತ ಪ್ರಗತಿಯನ್ನು ಸಾಧಿಸುತ್ತಿದೆ. ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಹರಿದು ಬಂದಿರುವ ಬಂಡವಾಳದಿಂದ ಹೆದ್ದಾರಿಗಳ ಚಿತ್ರಣ ಬದಲಾಗಿದೆ.
2014ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದ ತರುವಾಯ ಹೆದ್ದಾರಿ ನಿರ್ಮಾಣಕ್ಕೆ ಹೆಚ್ಚು ಮಹತ್ವ ಪಡೆದಿದೆ. ಆರ್ಥಿಕ ಪ್ರಗತಿ ಸಾಧಿಸಲು ರಸ್ತೆಗಳ ನಿರ್ಮಾಣವು ಬಹು ಮುಖ್ಯ. ರಸ್ತೆಯ ನಿರ್ಮಾಣವು ಕೈಗಾರಿಕೆ,ಕೃಷಿ ಮತ್ತು ಸ್ಥಿರಾಸ್ತಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತದೆ.
ದೇಶದಲ್ಲಿ ಈಗ ಒಟ್ಟು 1,41.190 ಕಿ.ಮಿ. ರಾಷ್ಟ್ರೀಯ ಹೆದ್ದಾರಿ ಇರುವುದು. 2014 ಏಪ್ರಿಲ್ ನಲ್ಲಿ 91,287 ಕಿ.ಮಿ. ನಿರ್ಮಾಣವಾಗಿತ್ತು. ಅಂದರೆ ಶೇಕಡಾ 50ರಷ್ಟು ಹೆದ್ದಾರಿಯನ್ನು ಕೇವಲ ಕಳೆದ 8 ವರ್ಷದಲ್ಲಿ ನಿರ್ಮಿಸಲಾಗಿದೆ. ಎಂಟು ವರ್ಷಗಳ ಅವಧಿಯಲ್ಲಿ ಮೋದಿ ಮತ್ತು ನಿತಿನ್ ಗಡ್ಕರಿ ಜೋಡಿಯು ದೇಶದಲ್ಲಿ ಹೆದ್ದಾರಿ ನಿರ್ಮಾಣದ ಬಹು ಕ್ರಾಂತಿಯನ್ನೆ ಮಾಡಿದ್ದಾರೆ.
2013ರಲ್ಲಿ ನ್ಯಾಯಾಲಯದಲ್ಲಿ ಕೇಂದ್ರ ಸರ್ಕಾರವು ಸಲ್ಲಿಸಿದ ಪ್ರಮಾಣಪತ್ರದಲ್ಲಿ, 1980 ರಲ್ಲಿ ದೇಶದಲ್ಲಿ 29,023 ಕಿ.ಮಿ. ರಾಷ್ಟ್ರೀಯ ಹೆದ್ದಾರಿಯಿಂದ 2013ಕ್ಕೆ 76,818 ಕಿ.ಮಿ. ಹೆದ್ದಾರಿ ಸೇರ್ಪಡೆಯಾಯಿತು ಅಂದರೆ 32 ವರ್ಷದಲ್ಲಿ 47,795 ಕಿ.ಮಿ.ಹೆದ್ದಾರಿ ನಿರ್ಮಾಣವಾಗಿದೆ.
1998 ರಿಂದ 2004 ರಲ್ಲಿ ಎನ್ ಡಿ ಎ ಸರ್ಕಾರವು 23,814 ಕಿ.ಮಿ. ಹೆದ್ದಾರಿ ನಿರ್ಮಿಸಿತ್ತು. ಮೂರು ದಶಕದಲ್ಲಿ ನಿರ್ಮಾಣ ಮಾಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೇಕಡಾ 50 ರಷ್ಟು ಎನ್ ಡಿ ಎ ಅವಧಿಯಲ್ಲಿಯೇ ನಿರ್ಮಿಸಲಾಗಿತ್ತು. 2004 ರಿಂದ 2014 ರ ಯುಪಿಎ ಸರ್ಕಾರವು ಕೇವಲ 16,000 ಕಿ.ಮಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿತ್ತು.
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಯುಪಿಎ ಅವಧಿಯ ನೀತಿ ನಿರೂಪಣೆ ದೋಷದಿಂದ ಸುಮಾರು ₹2 ಲಕ್ಷ ಕೋಟಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನೆನೆಗುದಿಗೆ ಬಿದಿದ್ದವು. ಮೋದಿ ಸರ್ಕಾರವು ಈ ಯೋಜನೆಗಳಿಗೆ ಸಂಬಂಧಿಸಿದ ಗೋಜಲನ್ನು ಬಿಡಿಸಿ ಒಂದೊಂದೇ ಕಾಮಗಾರಿಗಳನ್ನು ಮುಗಿಸಬೇಕಾಯಿತು. ಇದೀಗ ಹೊಸ ನೀತಿಯನ್ವಯ ಹೆದ್ದಾರಿ ಕಾಮಗಾರಿ ಆರಂಭಕ್ಕೆ ಮುನ್ನ ಶೇಕಡಾ 90ರಷ್ಟು ಭೂಸ್ವಾಧೀನ,ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ದೊರತ ತರುವಾಯವೇ ಕಾರ್ಯಾದೇಶ ಕೊಡುವುದನ್ನು ಕಡ್ಡಾಯ ಮಾಡಲಾಗಿದೆ. ಶೇಕಡಾ 50ರಷ್ಟು ಕಾಮಗಾರಿ ಮುಗಿಸಿದ ಸಂಸ್ಥೆಗಳಿಗೆ ಆದಾಯದ ಮೇಲೆ ಮೊದಲ ಹಕ್ಕಿನ ಆಧಾರದ ಮೇಲೆ ಕೇಂದ್ರ ಸರ್ಕಾರ ದುಡಿಯುವ ಬಂಡವಾಳ (working capital) ನೀಡುವ ಪದ್ದತಿ ಜಾರಿಗೆ ತಂದಿದೆ.ಈ ಎಲ್ಲಾ ಬದಲಾವಣೆಗಳಿಂದ ಕಾಮಗಾರಿ ವಿಳಂಬವಾಗದಿರಲು ಸಹಾಯವಾಗಿದೆ.
ಎನ್ ಡಿಎ ಮತ್ತು ಕಾಂಗ್ರೆಸ್ ಅವಧಿಯ ಹೆದ್ದಾರಿ ನಿರ್ಮಾಣ ಪ್ರಗತಿ ತುಲನೆ ಮಾಡಿದರೆ, ವಾಜಪೇಯಿ ಮತ್ತು ಮೋದಿಯವರ 14 ವರ್ಷಗಳ ಅವಧಿಯಲ್ಲಿ ಒಟ್ಟು 1.13,000 ಕಿ.ಮಿ. ರಾಷ್ಚ್ರೀಯ ಹೆದ್ದಾರಿಯನ್ನು ನಿರ್ಮಾಣವಾಗಿದ್ದರೆ, ಕಾಂಗ್ರೆಸ್ 80 ರ ನಂತರದ ತನ್ನ 24 ವರ್ಷಗಳ ಆಡಳಿತದಲ್ಲಿ 33,000 ಕಿ.ಮಿ. ಹೆದ್ದಾರಿಯನ್ನು ನಿರ್ಮಿಸಿದೆ.
2013 ರಲ್ಲಿ ದಿನಂಪ್ರತಿ 12ಕಿ.ಮಿ. ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು ಈಗ ಅದರ ವೇಗವು 33 ಕಿ.ಮಿ.ಗೆ ತಲುಪಿದೆ. ಇಂದಿನ ನಿರ್ಮಾಣದ ವೇಗ ಹೇಗಿದೆಯೆಂದರೆ ಸೋಲಾಪುರ ಮತ್ತು ವಿಜಯಪುರ ನಡುವೆ 25ಕಿ.ಮಿ ರಸ್ತೆಯನ್ನು 24 ಗಂಟೆಗಳಲ್ಲಿ ನಿರ್ಮಿಸಿ ವಿಶ್ವ ದಾಖಲೆ ಮಾಡಿದ್ದಾರೆ.
ರಸ್ತೆಗಳ ನಿರ್ಮಾಣದಿಂದ ಆರ್ಥಿಕ ಬೆಳವಣಿಗೆಗೆ ಅಪಾರ ಕೊಡುಗೆಯುಂಟು. ಲಕ್ಷಾಂತರ ಜನರಿಗೆ ಕೆಲಸ ದೊರೆಯುವುದು, ಸ್ಟೀಲ್ ಸಿಮೆಂಟ್, ಇನ್ನಿತರ ಪೂರಕ ಪದಾರ್ಥಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ. ರಸ್ತೆ ನಿರ್ಮಾಣವಾಗುವ ಪ್ರದೇಶದ ಸ್ಥಿರಾಸ್ತಿಯ ಬೆಲೆಯು ಹೆಚ್ಚಾಗಿ ರೈತರ ಜಮೀನಿಗೆ ಉತ್ತಮ ಬೆಲೆಯು ಬರುತ್ತದೆ. ಸರಕು ಸಾಗಣೆಗೆ ವೇಗ ದೊರೆಯುತ್ತದೆ. ಲಾಜಿಸ್ಟಿಕ್ ಕ್ಷೇತ್ರಕ್ಕೆ ಅಪಾರ ಲಾಭವಾಗಿ ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತದೆ.
2018 ರಲ್ಲಿ ಮಹತ್ವಪೂರ್ಣ ಭಾರತಮಾಲಾ ಪರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಮೊದಲ ಹಂತದಲ್ಲಿ 34,800 ಕಿ.ಮಿ. ರಸ್ತೆ ನಿರ್ಮಾಣವನ್ನು ₹5,35,000 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಮೂಲಕ 550 ಜಿಲ್ಲೆಗಳಿಗೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ದೊರೆಯಲಿದೆ. ಇದರಲ್ಲಿ ಆರ್ಥಿಕ ಕಾರಿಡಾರ್ ಕೈಗಾರಿಕಾ ಕಾರಿಡಾರ್ ಮತ್ತು ಲಾಜಿಸ್ಟಿಕ್ ಸಂಪರ್ಕ ಲಭ್ಯವಿರುವುದು.ಮೊದಲ ಹಂತದ ಯೋಜನೆಯು 2022ಕ್ಕೆ ಮುಕ್ತಾಯವಾಗಬೇಕಿತ್ತು ಆದರೆ ಕೊವಿಡ್ ಮತ್ತು ಇನ್ನಿತರ ಕಾರಣಗಳಿಗೆ 2026ಕ್ಕೆ ಮುಗಿಯುವ ಸಂಭವವಿರುವುದು.
ಕೇಂದ್ರ ಸಂಪುಟದಲ್ಲಿ ಕಳೆದ 8 ವರ್ಷದಿಂದ ಒಂದೇ ಖಾತೆಯನ್ನು ಹೊಂದಿರುವ ಏಕೈಕ ಸಚಿವರೆಂದರೆ ನಿತಿನ್ ಗಡ್ಕರಿಯವರು. ಬಿಜೆಪಿ ವಿರೋಧಿಗಳು ಕೂಡಾ ಇವರ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತಾರೆ. “ಅಭಿವೃದ್ಧಿ ವಿಷಯದಲ್ಲಿ ಗಡ್ಕರಿಯವರು ರಾಜಕೀಯ ಮಾಡುವುದಿಲ್ಲ” ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಕೂಡಾ ಹೊಗಳುತ್ತಾರೆ.
ಎಕ್ಸಪ್ರಸ್ ಹೈವೆ ನಿರ್ಮಿಸಲು ರಾಷ್ಚ್ರೀಯ ಎಕ್ಸಪ್ರೆಸ್ ಹೈವೇ ಪ್ರಾಧಿಕಾರ ರಚಿಸಲಾಗಿದೆ.ಈವರಗೆ 24,095 ಕಿ.ಮಿ. ಎಕ್ಸಪ್ರೆಸ್ ಹೈವೇ ನಿರ್ಮಾಣವಾಗಿದೆ. ದೆಹಲಿ ಮತ್ತು ಮುಂಬಯಿ ನಡುವೆ ದೇಶದ 1,350 ಕಿ.ಮಿ.ದೇಶದಲ್ಲೆ ಅತಿ ಉದ್ದದ ಎಕ್ಸಪ್ರೆಸ್ ಹೈವೇ ಶೀಘ್ರದಲ್ಲಿಯೇ ಕಾರ್ಯಾರಂಭವಾಗಲಿದೆ.
ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದಲ್ಲಿ ಫಾಸ್ಚ್ ಟ್ಯಾಗ್ ಪರಿಚಯಿಸಿ ತಡೆರಹಿತ ವಾಹನ ಚಾಲನೆ ಸಾಧ್ಯವಾಗಿ ಸಮಯ ಮತ್ತು ಇಂಧನ ಉಳಿತಾಯವಾಗುತ್ತಿದೆ. 2022ರಲ್ಲಿ ₹ 38,000 ಸಾವಿರ ಹಣವು ಫಾಸ್ಟ್ ಟ್ಯಾಗ್ ಮೂಲಕ ಸಂಗ್ರಹವಾಗಿದೆ. ನಿಜ, ಟೋಲ್ ಸಂಗ್ರಹ ವಾಹನ ಚಾಲಕರ ಜೇಬಿಗೆ ಹೊರೆಯಾಗಿದೆ.ಗುತ್ತಿಗೆದಾರರು ಟೋಲ್ ವಸೂಲಿ ನೆಪದಲ್ಲಿ ಸುಲಿಗೆ ಮಾಡದ ಹಾಗೆ ಪಾರದರ್ಶಕ ವ್ಯವಸ್ಥೆ ಜಾರಿಯಾಗಬೇಕು.
ಹೆದ್ದಾರಿ ನಿರ್ಮಾಣಕ್ಕೆ ಅದೆಷ್ಟು ಸಾವಿರ ಮರಗಳು ಹನನವಾಗಿರುವುದೋ ಲೆಕಕ್ಕೆ ಸಿಗದು. ನೂರಾರು ವರ್ಷಗಳಿಂದ ಬೆಳದು ನಿಂತ ಮರಗಳು ನೆಲಕಚ್ಚಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮರೋಪಾದಿಯಲ್ಲಿ ಪರ್ಯಾಯವಾಗಿ ಗಿಡ ನೆಡುವ ಕಡೆ ಗಮನ ಹರಿಸಬೇಕು. ಸ್ವತ: ಗಡ್ಕರಿಯವರೆ ಹೆದ್ದಾರಿ ಹಸಿರುಕರಣ ಯೋಜನೆಯು ಹೆಚ್ಚು ಪ್ರಗತಿ ಸಾಧಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ 8 ವರ್ಷದಲ್ಲಿ ಕರ್ನಾಟಕ ಹೆದ್ದಾರಿ ನಿರ್ಮಾಣದಲ್ಲಿ ಗಣನೀಯ ಅಭಿವೃದ್ಧಿ ಕಂಡಿರುವುದು. ರಾಜ್ಯದಲ್ಲಿ ಒಟ್ಚು 7,589ಕಿ.ಮಿ. ರಾಷ್ಟ್ರೀಯ ಹೆದ್ದಾರಿಗಳಿವೆ. ಬಹು ನಿರೀಕ್ಷೀತ ಮೈಸೂರು -ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯು ಮುಕ್ತಾಯ ಹಂತ ತಲುಪಿದೆ. ಚೆನ್ನೈ ಬೆಂಗಳೂರು ಎಕ್ಸಪ್ರೆಸ್ ಷಟ್ಪಥ ಕಾರಿಡಾರ್ ಕಾಮಗಾರಿಯು ಭರದಿಂದ ಸಾಗಿದೆ. ಒಮ್ಮೆ ಈ ರಸ್ತೆಯು ಮುಕ್ತಾಯವಾದರೆ ಬೆಂಗಳೂರು ಚನ್ನೈ ಪಯಣಕ್ಕೆ ಕೇವಲ ಎರಡು ಗಂಟೆಗಳು ಸಾಕಾಗುವುದು. ಹೈದರಾಬಾದ್ ಮತ್ತು ಬೆಂಗಳೂರು ಎಕ್ಸಪ್ರೆಸ್ ರಸ್ತೆಯ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಬೆಂಗಳೂರು ಮತ್ತು ಮುಂಬಯಿ ಹೊಸ ಮಾರ್ಗದ ರಸ್ತೆ ನಿರ್ಮಾಣವನ್ನು ಗಡ್ಕರಿಯವರು ಘೋಷಿಸಿದ್ದಾರೆ. ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ , ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ , ಬೆಳಗಾವಿ ಮುಖಾಂತರ ಸಾಗುವ ಈ ರಸ್ತೆಯು ಬೆಣಗಳೂರು ಪುಣೆ ಅಂತರವನ್ನು 75ಕಿ.ಮಿ. ಕಡಿಮೆ ಮಾಡುವುದು. ಈ ಯೋಜನೆಗೆ ಕೇಂದ್ರ ಸರ್ಕಾರ 40ಸಾವಿರ ಕೋಟಿ ವೆಚ್ಚ ಮಾಡಲಿದೆ.
ರಾಜ್ಯದ ಮೊಟ್ಟಮೊದಲ ಗ್ರೀನ್ ಫೀಲ್ಡ್ ಷಟ್ಪಥ ಎಕ್ಸ್ ಪ್ರಸ್ ಹೈವೆ ಕಲ್ಬುರ್ಗಿ ಮತ್ತು ರಾಯಚೂರು ನಡುವೆ 177ಕಿ.ಮಿ. 4 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಎಕ್ಸ್ ಪ್ರಸ್ ಹೈವೆ ಕಲ್ಯಾಣ ಕರ್ನಾಟಕವನ್ನು ಕಿತ್ತೂರು ಕರ್ನಾಟಕಕ್ಕೆ ಜೋಡಿಸುತ್ತದೆ. ಸದ್ಯ ರಾಜ್ಯದಲ್ಲಿ ₹40,000ಕೋಟಿ ವೆಚ್ಚದ ರಾಷ್ಚ್ರೀಯ ಹೆದ್ದಾರಿ ಕಾಮಗಾರಿಗಳು ಈಗಾಗಲೇ ನಡೆಯುತ್ತಿದೆ.
ಲೋಕಸಭೆಯಲ್ಲಿ ತಮ್ಮ ಇಲಾಖೆಯ ಚರ್ಚೆಯಲ್ಲಿ ಭಾಗವಹಿಸಿ ಉತ್ತರಿಸುವಾಗ ಹಲವಾರು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಡುತ್ತಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದ ಕಾರಣ ಜೋಜಿಲ್ಲಾ ಪಾಸ್ ಸುರಂಗ ನಿರ್ಮಾಣದಲ್ಲಿ ₹5,000ಕೋಟಿ ಉಳಿತಾಯವಾಗಿದ್ದು, ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಿರುವ ಮಾಜೋಲಿ ಬ್ರಿಡ್ಜ್ ನಿರ್ಮಾಣ ವೆಚ್ಚ ₹6,000 ಕೋಟಿಯಿಂದ ₹650 ಕೋಟಿಗೆ ಇಳಿಕೆ ಮಾಡಿದ್ದು, ದೆಹಲಿ ಮೀರಠ್ 14 ಪಥ ಎಕ್ಸಪ್ರಸ್ ಹೈವೆ ಫಲವಾಗಿ 4.5ಗಂಟೆಗಳ ಪ್ರಯಾಣವು 40ನಿಮಿಷಕ್ಕೆ ಇಳಿದಿರುವ ಮಾಹಿತಿಯನ್ನು ಹಂಚಿಕೊಂಡರು.
ಈ ಬಾರಿಯ ಮುಂಗಡ ಪತ್ರದಲ್ಲಿ ಭೂಸಾರಿಗೆ ಇಲಾಖೆಗೆ ₹1,99,107 ಕೋಟಿ ಹಣವು ಮೀಸಲಿರಿಸಲಾಗಿದೆ. ಕಳೆದ ಬಾರಿಗೆ ಹೋಲಿಕೆಯಲ್ಲಿ ಶೇಕಡಾ 68% ಹೆಚ್ಚಳವಾಗಿದೆ. ದೇಶದಲ್ಲಿ ಹೆದ್ದಾರಿಗಳ ನಿರ್ಮಾಣವು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ ಯಾವುದೇ ಭ್ರಷ್ಟಾಚಾರದ ಸೋಂಕಿಲ್ಲದೆ ಹಗರಣಗಳ ಹಾವಳಿ ಇಲ್ಲದೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯ,ಹತ್ತು ಲಕ್ಷ ಕೋಟಿ ರೂಪಾಯಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ದೇಶಾದ್ಯಂತ್ಯ ನಡೆಯುತ್ತಿದೆ.
ದೇಶದಲ್ಲಿ ಪ್ರತಿ ವರ್ಷ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದೆ ಮತ್ತು 1.5 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಹಾಗೂ 3 ಲಕ್ಷ ಜನ ತೀವ್ರವಾಗಿ ಗಾಯಗೊಂಡು ಅಂಗವಿಕಲರಾಗುತ್ತಿದ್ದಾರೆ. ಪ್ರಪಂಚದಲ್ಲೆ ಅತಿ ಹೆಚ್ಚು ಅಪಘಾತ ಭಾರತದಲ್ಲಿ ಸಂಭವಿಸುತ್ತಿರುವುದು ಇದಲ್ಲದೆ ಶೇಕಡಾ 3ರಷ್ಟು ಜಿಡಿಪಿ ನಷ್ಟವಾಗುತ್ತಿದೆ. ಉತ್ತಮ ರಸ್ತೆ ಉತ್ತಮ ಅಭ್ಯಾಸಗಳನ್ನು ಕೈಗೊಂಡರೆ ಈ ಸಂಖ್ಯೆ ಗಣನೀಯವಾಗಿ ಇಳಿಸಬಹುದು ಈ ದಿಶೆಯಲ್ಲಿ ಮೋದಿ ಸರ್ಕಾರ ಅತಿ ಹೆಚ್ಚಿನ ಬದ್ದತೆಯಿಂದ ಯೋಜನೆಗಳ ಅನುಷ್ಠಾನ ಕೈಗೊಳ್ಳುತ್ತಿದೆ.
ಭಾರತದಲ್ಲಿ ಶೇಕಡಾ ಶೇಕಡಾ 70ರಷ್ಟು ಸರಕು ಮತ್ತು ಶೇಕಡಾ 85ರಷ್ಟು ಪ್ರಯಾಣಿಕರ ಸಂಚಾರ ರಸ್ತೆ ಮಾರ್ಗವಾಗಿ ನಡೆಯುತ್ತಿದೆ. ರಸ್ತೆಯ ಪ್ರಾಮುಖ್ಯತೆ ಮತ್ತು ಅದರ ಮೇಲಿರುವ ಒತ್ತಡವನ್ನು ಇದರಿಂದ ಊಹಿಸಬಹುದಾಗಿದೆ.
ಮೋದಿಯವರ ದೂರದೃಷ್ಟಿ ಹಾಗೂ ನಿತಿನ್ ಗಡ್ಕರಿಯವರ ದಕ್ಷತೆ ಮತ್ತು ಬದ್ಧತೆಯ ಫಲವಾಗಿ ದೇಶದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಶರವೇಗದಲ್ಲಿ ನಡೆಯುತ್ತಿದೆ ಮತ್ತು ಗುಣಮಟ್ಚದ ಕಾಮಗಾರಿಯು ನಡೆಯುತ್ತಿರುವುದರಿಂದ ದೇಶದ ರಸ್ತೆಗಳ ನಕ್ಷೆ ಬದಲಾಗುತ್ತಿದೆ. ನಗರಗಳ ನಡುವಿನ ಅಂತರ ಕಡಿಮೆಯಾಗಿ ಅಪಾರ ಸಮಯ ಹಾಗೂ ಇಂಧನ ಉಳಿತಾಯವಾಗುತ್ತಿದೆ.
ಪ್ರಕಾಶ್ ಶೇಷರಾಘವಾಚಾರ್
sprakashbjp@gmail.com
Prakash Sesharaghavachar is a Joint Spokesperson of Karnataka BJP
Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.