ಮೈಸೂರು:
ನಗರದ ಜಿಲ್ಲಾ ನ್ಯಾಯಾಲಯ ಆವರಣದ ಶೌಚಾಲಯದಲ್ಲಿ ಐದು ವರ್ಷಗಳ ಹಿಂದೆ ಬಾಂಬ್ ಸ್ಫೋಟಿಸಿದ್ದ ಪ್ರಕರಣದಲ್ಲಿ ತಮಿಳುನಾಡು ಮೂಲದ ಮೂವರನ್ನು ತಪ್ಪಿತಸ್ಥರು ಎಂದು ನಗರದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯ ಶುಕ್ರವಾರ ಘೋಷಿಸಿದೆ.
ನಾಯ್ನರ್ ಅಬ್ಬಾಸ್ ಅಲಿ ಅಲಿಯಾಸ್ ಲಿಬ್ರಾರಿ ಅಬ್ಬಾಸ್, ಎಂ ಸ್ಯಾಮ್ಸನ್ ಕರೀಂ ರಾಜ ಅಲಿಯಾಸ್ ಅಬ್ದುಲ್ ಕರೀಂ ಮತ್ತು ಎಸ್ ದಾವೂದ್ ಸುಲೇಮಾನ್ ಅವರನ್ನು ಅಪರಾಧಿಗಳು ಎಂದು ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಸನಪ್ಪ ನಾಯ್ಕ್ ತೀರ್ಪು ಪ್ರಕಟಿಸಿದ್ದಾರೆ.
ಮೈಸೂರು ಜಿಲ್ಲಾ ನ್ಯಾಯಾಲಯದ ಹಿಂದಿನ ಸಾರ್ವಜನಿಕ ಶೌಚಾಲಯದಲ್ಲಿ ಆರೋಪಿಗಳು ಬಾಂಬ್ ಸ್ಫೋಟಿಸಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ. ಹಾಗಾಗಿ, ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ), ಭಾರತೀಯ ದಂಡ ಸಂಹಿತೆ ಮತ್ತು ಸ್ಫೋಟಕ ವಸ್ತುಗಳ ಕಾಯಿದೆ, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆಯಡಿ ಈ ಮೂವರನ್ನು ಅಪರಾಧಿಗಳಾದಿಗಳು ಎಂದು ತೀರ್ಮಾನಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಅಪರಾಧಿಗಳಿಗೆ ಎಷ್ಟು ಶಿಕ್ಷೆ ವಿಧಿಸಬೇಕು ಎಂದು ಎನ್ಐಎ ಮತ್ತು ಅಪರಾಧಿಗಳ ಪರ ವಕೀಲರನ್ನು ನ್ಯಾಯಾಲಯ ಕೇಳಿತು. ಎನ್ಐಎ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಆರೋಪಿಗಳು ಮೈಸೂರು ನ್ಯಾಯಾಲಯದಲ್ಲಿ ಮಾತ್ರ ಬಾಂಬ್ ಸ್ಫೋಟಿಸಿಲ್ಲ. ದೇಶದ ವಿವಿಧ ಐದು ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟ ಕೃತ್ಯ ಎಸಗಿದ್ದಾರೆ. ಆ ಮೂಲಕ ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ನಡೆಸಿದ್ದಾರೆ. ಹೀಗಾಗಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು” ಎಂದು ಕೋರಿದರು.
ಅಪರಾಧಿಗಳ ಪರ ವಕೀಲರು ಕನಿಷ್ಠ ಅಂದರೆ 10 ವರ್ಷ ಶಿಕ್ಷೆ ವಿಧಿಸಬಹುದು ಎಂದು ಹೇಳಿದರು. ಈ ಮನವಿ ಆಲಿಸಿದ ನ್ಯಾಯಾಧೀಶರು ಅಪರಾಧಿಗಳಿಗೆ ಅಕ್ಟೋಬರ್ 11ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದರು.
NIA Special Court three Al Qaeda- Base Movement terrorists in Mysuru Court Blast Case pic.twitter.com/c8C6nOwZV0
— NIA India (@NIA_India) October 8, 2021
ಮೈಸೂರು ನಗರದ ಚಾಮರಾಜಪುರದಲ್ಲಿರುವ ಜಿಲ್ಲಾ ನ್ಯಾಯಾಲಯದ ಹಿಂಬದಿಯಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ 2016ರ ಆಗಸ್ಟ್ 1ರಂದು ಬಾಂಬ್ ಸ್ಫೋಟವಾಗಿತ್ತು. ಅದೇ ದಿನ ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಬಳಿಕ ಎನ್ಐಎ ತನಿಖೆ ಕೈಗತ್ತಿಕೊಂಡು ತಮಿಳುನಾಡು ಮೂಲದ ನಾಯ್ನರ್ ಅಬ್ಬಾಸ್ ಅಲಿ, ಎಂ ಸ್ಯಾಮ್ಸನ್ ಕರೀಂ ರಾಜ, ಎಸ್ ದಾವೂದ್ ಸುಲೇಮಾನ್ ಅವರನ್ನು 2017 ನವೆಂಬರ್ 27ರಂದು ಬಂಧಿಸಲಾಗಿತ್ತು. ಬಳಿಕ 2018ರ ಮೇ 25ರಂದು ಈ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಎನ್ಐಎ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು 2021ರ ಸೆಪ್ಟೆಂಬರ್ 29ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. 2016ರಲ್ಲಿ ನಡೆದ ಐದು ಸರಣಿ ಬಾಂಬ್ ಸ್ಫೋಟಗಳಲ್ಲಿ ಮೈಸೂರು ಪ್ರಕರಣ ಸಹ ಒಂದಾಗಿತ್ತು.
ಇದಕ್ಕೂ ಮುನ್ನ 2016ರ ಏಪ್ರಿಲ್ 7ರಂದು ಆಂಧ್ರ ಪ್ರದೇಶದ ಚಿತ್ತೂರಿನ ನ್ಯಾಯಲಯದಲ್ಲಿ ಜೂನ್ 15ರಂದು ಕೇರಳದ ಕೊಲ್ಲಮ್ ನ್ಯಾಯಾಲಯದಲ್ಲಿ ಆಗಸ್ಟ್ 1 ರಂದು ಮೈಸೂರು ನ್ಯಾಯಾಲಯದಲ್ಲಿ ಸೆಪ್ಟೆಂಬರ್ 12ರಂದು ಆಂಧ್ರಪ್ರದೇಶದ ನೆಲ್ಲೂರು ನ್ಯಾಯಾಲಯದಲ್ಲಿ ಹಾಗೂ ನವೆಂಬರ್ 2ರಂದು ಕೇರಳದ ಮಲ್ಲಪುರಮ್ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದವು.
ಪ್ರಕರಣದಲ್ಲಿ ಆರೋಪಿಯಾಗಿದ್ದ ಮೋಹಮದ್ ಆಯೂಬ್ ವಿರುದ್ಧದ ಆರೋಪವನ್ನು ಕರ್ನಾಟಕ ಹೈಕೋರ್ಟ್ ಕೈಬಿಟ್ಟಿತ್ತು. ಇನ್ನೊಬ್ಬ ಆರೋಪಿ ಶಂಶುದ್ದೀನ್ ಕರುವಾ ವಿರುದ್ಧದ ಆರೋಪಗಳನ್ನು ಎನ್ಐಎ ಅಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು