Home ಬೆಂಗಳೂರು ನಗರ NICE Project: ನೈಸ್ ಅಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್.ಡಿ.ಕುಮಾರಸ್ವಾಮಿ ದೂರು

NICE Project: ನೈಸ್ ಅಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್.ಡಿ.ಕುಮಾರಸ್ವಾಮಿ ದೂರು

36
0
NICE Project: HD Kumaraswamy to complains to Prime Minister Narendra Modi
NICE Project: HD Kumaraswamy to complains to Prime Minister Narendra Modi

ಪ್ರಧಾನಿ & ಕೇಂದ್ರ ಗೃಹ ಸಚಿವರ ಭೇಟಿಗೆ ಸಮಯಾವಕಾಶ ಕೆಳಲಿರುವ ಮಾಜಿ ಸಿಎಂ

ಸಿಬಿಐ ತನಿಖೆಗೆ ಆಗ್ರಹ ಮಾಡುವುದಾಗಿ ಹೇಳಿದ ಹೆಚ್ಡಿಕೆ; ದೂರು ನೀಡಿದ ದಿನವೇ ದೆಹಲಿಯಲ್ಲಿ ನೈಸ್ ಅಕ್ರಮಗಳ ದಾಖಲೆ ಬಿಡುಗಡೆ

ಬೆಂಗಳೂರು:

ಬೆಂಗಳೂರು -ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ (ನೈಸ್) ಅಕ್ರಮಗಳ ಕುರಿತ ಎಲ್ಲಾ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿಯಾಗಿ ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದಿಲ್ಲಿ ಘೋಷಣೆ ಮಾಡಿದರು.

ಅವರ ಭೇಟಿಯ ನಂತರ ಅದೇ ದಿನದಂದು ದೆಹಲಿಯಲ್ಲಿ ಈ ಅಕ್ರಮಗಳ ಎಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇನೆ ಹಾಗೂ ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಅವರು ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. ಅದಕ್ಕೆ ಅವಕಾಶ ಸಿಗಲಿಲ್ಲ. ರಾಜ್ಯದ ಹಿತ ಮತ್ತು ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ನೇರವಾಗಿ ಪ್ರಧಾನಿ ಅವರನ್ನೇ ಭೇಟಿ ಆಗಲಿದ್ದೇನೆ. ಒಂದೆರಡು ದಿನದಲ್ಲಿ ಪ್ರಧಾನಿಗಳು ಹಾಗೂ ಗೃಹ ಸಚಿವರ ಭೇಟಿಗೆ ಸಮಯಾವಕಾಶ ಕೋರಲಾಗುವುದು ಎಂದರು.

ಮೂಲಸೌಕರ್ಯ ಹಾಗೂ ರೈತರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಹಣ ಮತ್ತು ಭೂಮಿಯನ್ನು ಕೊಳ್ಳೆ ಹೊಡೆದಿದ್ದಾರೆ. ಆ ಬಗ್ಗೆ ಎಲ್ಲಾ ದಾಖಲೆ ಸಂಗ್ರಹ ಮಾಡಿದ್ದಿನಿ. ನೇರವಾಗಿ ಪ್ರಧಾನಿ ಅವರಲ್ಲಿಯೇ ನ್ಯಾಯ ಕೇಳುತ್ತೇನೆ, ಅವರನ್ನೇ ಪ್ರಶ್ನೆ ಮಾಡುತ್ತೇನೆ. ನಮ್ಮ ರೈತರಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡುತ್ತೇನೆ. ಎಂದು ಅವರು ಹೇಳಿದರು.

ಪೆನ್ ಕೊಡಿ ಎಂದವರಿಂದಲೇ ಅಕ್ರಮ:

ಈ ಸರಕಾರದಲ್ಲಿರುವ ಅತ್ಯಂತ ಪ್ರಭಾವಿಯೊಬ್ಬರು ಫೆರಿಫಿರಲ್ ರಿಂಗ್ ರೋಡ್ ಮಾಡಲು ನೈಸ್ ಜತೆ ಸೇರಿಕೊಂಡು ಏನೆಲ್ಲಾ ಕರ್ಮಕಾಂಡ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡಿದ್ದ ಬಡವರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಆ ಮಹಾನುಭಾವರು ನನಗೂ ಒಮ್ಮೆ ಪೆನ್ ಹಿಡಿಯುವ ಅವಕಾಶ ಕೊಡಿ ಎಂದು ಕೇಳಿದ್ದು ಇದಕ್ಕೇನಾ? ಎಂದು ಯಾರೊಬ್ಬರ ಹೆಸರು ಹೇಳದೆಯೇ ಮಾಜಿ ಮುಖ್ಯಮಂತ್ರಿ ಅವರು ಟೀಕಾಪ್ರಹಾರ ನಡೆಸಿದರು.

ನೈಸ್ ಯೋಜನೆಯಲ್ಲಿ ಅಕ್ರಮಗಳ ಸರಣಿಯೇ ನಡೆದಿದೆ. ಯೋಜನೆಗೆ ಸ್ವಾಧೀನಕ್ಕೆ ಗುರುತಿಸಲಾಗಿದ್ದ, ಪ್ರಾಥಮಿಕ ಅಧಿಸೂಚನೆ ಮಾಡಲಾಗಿದ್ದ ಭೂಮಿಯನ್ನೇ ಖರೀದಿ ಮಾಡಿದ್ದ ಆ ಮಹಾನುಭಾವರಿಗೆ ಇದೆಲ್ಲವನ್ನೂ ಜೀರ್ಣ ಮಾಡುವ ತಾಕತ್ತು ಇದೆ. ನಾನು ಇಲ್ಲ ಎನ್ನಲು ಆಗುತ್ತದೆಯೇ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಅಧಿಸೂಚನೆ ಆಗಿದ್ದ ಬಡ ರೈತರ ಭೂಮಿಯನ್ನೇ ಸ್ವಾಹಾ ಮಾಡಿದವರು ಇಂದು ಬ್ರ್ಯಾಂಡ್ ಬೆಂಗಳೂರು ಭಜನೆ ಮಾಡುತ್ತಿದ್ದಾರೆ. ಎಲ್ಲಿ ಯಾರ ಭೂಮಿ, ಹಿದೆದುಕೊಳ್ಳೋಣ ಎಂದು ಹೊಂಚು ಹಾಕುವವರಿಂದ ಬೆಂಗಳೂರು ಉದ್ಧಾರ ಸಾಧ್ಯವೇ? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಕನ್ನಡಿಗರಿಗೆ ಏನಾಗಿದೆ?

ಪ್ರತಿ ಸಣ್ಣ ವಿಷಯಕ್ಕೆ ನಾಡು, ನೀಡಿ, ಕನ್ನಡ ಅಸ್ಮಿತೆಯ ಮಾತನಾಡುವ ಮಂದಿ ಈಗೆಲ್ಲಿ ಹೋಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರೈತರ 5 ಸಾವಿರ ಎಕರೆಯಲ್ಲಿ ಕಾರ್ಖಾನೆ ಕಟ್ಟಲು ಹೊರಟವರ ವಿರುದ್ಧ ಅಲ್ಲಿ ಬೃಹತ್ ಹೋರಾಟ ನಡೆಯಿತು. ಆ ಹೋರಾಟದಿಂದಲೇ ಮಮತಾ ಬ್ಯಾನರ್ಜಿ ಹುಟ್ಟಿಕೊಂಡು ನಾಯಕಿಯಾಗಿ ಹೊರಹೊಮ್ಮಿದರು. ಆದರೆ ನಮ್ಮವರಿಗೆ ಏನಾಗಿದೆ ಎಂದು ಗೊತ್ತಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರ ಭೂಮಿಯನ್ನು ಕೊಳ್ಳೆ ಹೊಡೆಯುತ್ತಿದ್ದರೂ ಕನ್ನಡಿಗರು ಮೌನವಾಗಿದ್ದಾರೆ. ಇಲ್ಲಿ ಏನಾಗಿದೆ ಎನ್ನುವುದು ನನಗೆ ಅರ್ಥ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ನೈಸ್ ಅಕ್ರಮದ ಬಗ್ಗೆ ಸೂಕ್ತ ತನಿಖೆ ಆಗಬೇಕು. ಸದನದ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಸಿಬಿಐ ತನಿಖೆಯೇ ನಡೆಯಬೇಕು. ಸರ್ಕಾರಕ್ಕೆ ವಂಚನೆ ಮಾಡಿರುವ ಹಾಗೂ ಜನರ ಭೂಮಿಯನ್ನು ನುಂಗಿರುವ ಕುಳಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದ ಅವರು, ಈ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿಗಳಿಗೆ ಸಲ್ಲಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೆ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಬೆದರಿಕೆ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆಯೂ ತನಿಖೆ ಆಗಬೇಕು ಎಂದ ಮಾಜಿ ಮುಖ್ಯಮಂತ್ರಿ ಅವರು; ಇಷ್ಟೆಲ್ಲಾ ನಡೆಯುತ್ತಿದ್ದರೂ ಈಗಿನ ಕಾನೂನು ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಹಿಂದೆ ಬಳ್ಳಾರಿಯ ಜಿಂದಾಲ್ ಗೆ ಭೂಮಿ ಕೊಡಬಾರದು ಎಂದು ಹೆಚ್.ಕೆ.ಪಾಟೀಲ್ ಅವರೇ ಸರಕಾರಕ್ಕೆ ಪತ್ರ ಬರೆದಿದ್ದರು. ಈಗ ಅವರೇ ಸಚಿವರು. ಈಗೇನು ಮಾಡುತ್ತಿದ್ದಾರೆ? ಇಷ್ಟು ದೊಡ್ಡ ಪ್ರಮಾಣದ ಜನರ ಭೂಮಿಯನ್ನು ಉಳಿಸಿಕೊಳ್ಳಲು ಏನು ಮಾಡಿದ್ದೀರಿ? ಕಾನೂನು ಸಚಿವರಾಗಿ ನಿಮ್ಮ ಜವಾಬ್ದಾರಿ ಏನು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here