44 ನೇ ಜಿಎಸ್ಟಿ ಮಂಡಳಿ ಸಭೆ
ಬೆಂಗಳೂರು:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 44ನೇ ಸರಕು ಮತ್ತು ಸೇವಾ ತೆರಿಗೆ ಪರಿಷತ್ತಿನ ಮಹತ್ವದ ಸಭೆ ಶನಿವಾರ ಜರುಗಿತು. ಈ ಸಭೆಯಲ್ಲಿ ಗ್ರೂಪ್ ಆಫ್ ಮಿನಿಸ್ಟರ್ಸ್ ಸಲ್ಲಿಸಿದ ಕೋವಿಡ್ ಪರಿಹಾರ ಸಾಮಗ್ರಿಗಳ ಮೇಲಿನ ಜಿ ಎಸ್ ಟಿ ದರಗಳಲ್ಲಿನ ರಿಯಾಯಿತಿ / ವಿನಾಯಿತಿ ಸಂಬಂಧಿಸಿದ ವರದಿಯ ಕುರಿತು ಚರ್ಚೆ ನಡೆಯಿತು.
ಗ್ರೂಪ್ ಆಫ್ ಮಿನಿಸ್ಟರ್ಸ್ ಕೆಲವು ಔಷಧಗಳ ಮೇಲಿನ ಜಿಎಸ್ ಟಿಯನ್ನು ಶೇಕಡ 5ರಿಂದ ಶೂನ್ಯಕ್ಕೆ, ರೆಮ್ ಡಿಸಿವಿರ್ ಮೇಲಿನ ಜಿ ಎಸ್ ಟಿ ಯನ್ನು ಶೇ. 12ರಿಂದ ಶೇ. 5 ಕ್ಕೆ, ಆಮ್ಲಜನಕ ಉತ್ಪಾದನಾ ಉಪಕರಣ ಹಾಗೂ ಕೋವಿಡ್ ಪರೀಕ್ಷಾ ಕೀಟ್ ಗಳ ಮೇಲಿನ ಶೇಕಡಾ 12ರ ಜಿಎಸ್ ಟಿ ದರವನ್ನು ಶೇ. 5ಕ್ಕೆ ಕಡಿಮೆ ಮಾಡುವುದಕ್ಕೆ ಶಿಫಾರಸ್ಸು ಮಾಡಿರುತ್ತದೆ. ತಾಪಮಾನ ಪರೀಕ್ಷಾ ಉಪಕರಣ ಹಾಗೂ ಶವಾಗಾರ ಗಳಿಗಾಗಿ ಬಳಕೆ ಆಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೇಸ್ ಗಳಿಗೆ ಸಂಬಂಧಿಸಿದಂತೆ ಜಿ ಎಸ್ ಟಿ ಯನ್ನು ಶೇಕಡ 18 ರಿಂದ 12ಕ್ಕೆ ಕಡಿತಗೊಳಿಸಲು ಶಿಫಾರಸು ಮಾಡಿದೆ. ಅಂಬುಲೆನ್ಸ್ ಮೇಲೆ ಯಾವುದೇ ಕಡಿತವನ್ನು ಶಿಫಾರಸ್ಸು ಮಾಡಿರುವುದಿಲ್ಲ.
ಜಿಎಸ್ಟಿ ಮಂಡಳಿ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ ರಾಜ್ಯದ ಜಿಎಸ್ಟಿ ಪ್ರತಿನಿಧಿ ಹಾಗೂ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ group.of ಮಿನಿಸ್ಟರ್ಸ್ ಶಿಫಾರಸುಗಳನ್ನು ಸ್ವಾಗತಿಸಿದರು. ಅದರ ಜೊತೆಗೆ ಇನ್ನಷ್ಟು ತೆರಿಗೆ ಕಡಿತಕ್ಕಾಗಿ ಕೇಂದ್ರ ಹಣಕಾಸು ಸಚಿವರನ್ನು ಕೋರಿದರು.
ತಾಪಮಾನ ಪರೀಕ್ಷಾ ಉಪಕರಣ, ಹಾಗೂ ಶವಾಗಾರಗಳಿಗಾಗಿ ಬಳಕೆಯಾಗುವ ಗ್ಯಾಸ್, ಎಲೆಕ್ಟ್ರಿಕ್ ಫರ್ನೆಸ್ ವಸ್ತುಗಳ ಮೇಲಿನ ತೆರಿಗೆಯನ್ನು ಶೇ. 18 ರಿಂದ 5 ಕ್ಕೆ ಮತ್ತು ಅಂಬುಲೆನ್ಸ್ ವಾಹನಗಳ ಮೇಲಿನ ತೆರಿಗೆಯನ್ನು ಶೇ. 28ರಿಂದ ಶೇಕಡ 12 ಕ್ಕೆ ಇಳಿಸುವಂತೆ ಮನವಿ ಮಾಡಿದರು.
ಬಸವರಾಜ ಬೊಮ್ಮಾಯಿ ಅವರ ಈ ಮನವಿಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯಲ್ಲಿಯೇ ಅನುಮೋದನೆ ನೀಡಿದರು.
ಈ ರಿಯಾಯಿತಿಗಳನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲು ಅವರು ಮಾಡಿಕೊಂಡ ಮನವಿಗೂ ಜಿಎಸ್ಟಿ ಮಂಡಳಿ ಒಪ್ಪಿಗೆ ನೀಡಿತು. ಇದಕ್ಕಾಗಿ ಸಚಿವ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಿಗೆ ಧನ್ಯವಾದ ಅರ್ಪಿಸಿದರು.
2022 ನಂತರದ ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದ ವಿಷಯ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಬೊಮ್ಮಾಯಿ ಅವರು ಕೋರಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶೀಘ್ರದಲ್ಲಿಯೇ ಸಭೆ ಕರೆಯಲು ಒಪ್ಪಿಕೊಂಡರು.
ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ ಎಸ್ ಶ್ರೀಕರ್ ಸಭೆಯಲ್ಲಿ ಉಪಸ್ಥಿತರಿದ್ದರು.