ಕೊಪ್ಪಳ:
ಕೊಪ್ಪಳ ಜಿಲ್ಲೆಯಲ್ಲಿ ಸಂಭವಿಸಿದ್ದ ಮೂವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ ಎಂಬುದು ಮೃತರ ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.
ಮೃತಪಟ್ಟಿದ್ದ ಮೂವರ ಪೈಕಿ ಇಬ್ಬರು ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೇ 31ರಂದು ಮೃತಪಟ್ಟ ಬಸರಿಹಾಳ ಗ್ರಾಮದ ಹೊನಮ್ಮ ಎಂಬ ವೃದ್ಧೆಯ ಸಾವಿಗೆ ಹೃದಯ ಮತ್ತು ಕಿಡ್ನಿ ವೈಫಲ್ಯ ಕಾರಣವಾಗಿತ್ತು. ಅದೇ ರೀತಿ ಜೂನ್ 6 ರಂದು ಮೃತಪಟ್ಟಿದ್ದ ಒಂಬತ್ತು ತಿಂಗಳ ಮಗು ಶ್ರುತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ 4,000 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕೆಲವು ಮೂಲಗಳು ಕಲುಷಿತಗೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಬೋರ್‌ವೆಲ್‌ಗಳು ಕಲುಷಿತಗೊಂಡಿವೆಯೋ, ಅವುಗಳನ್ನು ಮುಚ್ಚಲಾಗಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದರಿಂದ ರಾಸಾಯನಿಕ ಮಾಲಿನ್ಯ ಉಂಟಾಗಿದೆ. ಕೆಲ ನೀರಿನ ಮೂಲದಲ್ಲಿ ಬ್ಯಾಕ್ಟೀರಿಯಾದ ಮಾಲಿನ್ಯವೂ ಕಂಡುಬಂದಿದೆ. ಈ ಎಲ್ಲಾ ಬೋರ್‌ವೆಲ್‌ಗಳನ್ನು ಮುಚ್ಚಲಾಗಿದೆ. ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.