ಗುತ್ತಿಗೆ ಆಧಾರದಲ್ಲಿ ಪ್ರಾಯೋಗಿಕ ಸಂಚಾರ ಮಾತ್ರ
ಬೆಂಗಳೂರು:
ವಿದ್ಯುತ್ ಬಸ್ ಖರೀದಿ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ,ಕೇವಲ ಗುತ್ತಿಗೆ ಆಧಾರದಲ್ಲಿ ವಿದ್ಯಿತ್ ಬಸ್ ಗಳ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದ್ದು ಅದರ ಫಲಿತಾಂಶ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಹಾಂತೇಶ್ ಕವಠಗಿಮಠ್ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ,ವಿದ್ಯುತ್ ಬಸ್ ಖರೀದಿ ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಈ ಬಗ್ಗೆ ಮುಂದಿನ ದಿನದಲ್ಲಿ ಚಿಂತನೆ ಮಾಡಲಿದ್ದೇವೆ. ಆದರೆ ಮಾಲಿನ್ಯ ವಿಪರೀತವಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಇದೆ, ಹಾಗಾಗಿ ಕೇಂದ್ರ ಸರ್ಕಾರ ಒಂದು ಬಸ್ಸಿಗೆ 55 ಲಕ್ಷ ಸಬ್ಸಿಡಿ ಕೊಡುತ್ತಿದೆ. ಪ್ರಾಯೋಗಿಕವಾಗಿ 300 ಬಸ್ ಓಡಿಸಲು ಅನುಮತಿ ಕೊಡಲಾಗಿದೆ. ಆದರೆ ನಾವು ಬಸ್ ಖರೀದಿ ಮಾಡುತ್ತಿಲ್ಲ, ಕಿಲೋಮೀಟರ್ ಆಧಾರದಲ್ಲಿ ನಾವು ಬಸ್ ಗುತ್ತಿಗೆ ಪಡೆಯಲಿದ್ದೇವೆ. ಇದಕ್ಕಾಗಿ ಟೆಂಟರ್ ಕರೆದಿದ್ದು, ಹೆಚ್ಚು ದರ ನಮೂದು ಮಾಡಿದ ಕಾರಣ ನಾಲ್ಕು ಬಾರಿ ತಿರಸ್ಕಾರ ಮಾಡಿದ್ದೇವೆ , ಈಗ ಐದನೇ ಬಾರಿ ಕರೆದಿದ್ದೇವೆ, ಮುಂದಿನ ತಿಂಗಳಿನಲ್ಲಿ 300 ಬಸ್ ಗುತ್ತಿಗೆ ಪಡೆಯಲಿದ್ದೇವೆ. ಟಾಟಾ, ಲೈಲ್ಯಾಂಡ್, ಜೈ ಭಾರತ್ ಸೇರಿ ಐದಾರು ಕಂಪನಿ ಮುಂದೆ ಬಂದಿವೆ.48-50 ರೂ.ಕಿಮೀಗೆ ಬಂದಲ್ಲಿ ಟೆಂಡರ್ ಕೊಡಲಿದ್ದೇವೆ ಎಂದರು.