Home ಬೆಂಗಳೂರು ನಗರ ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

36
0
nothing is impossible when everyone works together says Karnataka Chief Minister Basavaraj Bommai

ಬೆಂಗಳೂರು:

ಎಲ್ಲರೂ ಸೇರಿ ಕೆಲಸ ಮಾಡಿದಾಗ ಯಾವುದೂ ಅಸಾಧ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಕೆ.ಎಸ್. ಆರ್.ಟಿ.ಸಿ ವತಿಯಿಂದ ನವೀಕೃತಗೊಂಡಿರುವ ಮಕ್ಕಳ ಕೋವಿಡ್ 19 ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರ, ಬಿಬಿಎಂಪಿ, ಕಾರ್ಪೊರೇಟ್ ವಲಯ ಎಲ್ಲರೂ ಸೇರಿ ಈ ಮಕ್ಕಳ ಆಸ್ಪತ್ರೆಯನ್ನು ಪುನರ್ ನಿರ್ಮಿಸಿದ್ದಾರೆ. ಕೋವಿಡ್ ನಿಂದಾಗಿ ಎಲ್ಲರಿಗೂ ಆರ್ಥಿಕ ತೊಂದರೆಗಳಾಗಿವೆ. ಜನ ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಆದರೆ ಮತ್ತೊಂದೆಡೆ ನಮ್ಮೆಲ್ಲರನ್ನು ಒಗ್ಗೂಡಿಸಿಸುವ ಕೆಲಸವನ್ನು ಮಾಡಿದೆ. ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕೆನ್ನುವ ಮನಸ್ಥಿತಿಗೆ ಬಂದದ್ದರಿಂದ ಇಂಥ ಕೆಲಸಗಳು ಆಗುತ್ತವೆ ಎಂದರು.

ಮಾನವೀಯತೆ ಬಹಳ ಮುಖ್ಯ. ಇನ್ನೊಬ್ಬರಿಗಾಗಿ ಮನ ಮಿಡಿಯದಿದ್ದರೆ, ಮತ್ತೊಬ್ಬರಿಗಾಗಿ ನಾವು ಕೆಲಸ ಮಾಡದಿದ್ದರೆ, ಈ ಜೀವನ ಸಾರ್ಥಕವಾಗುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಕೋವಿಡ್ 1 ಮತ್ತು 2 ನೇ ಅಲೆಯಿಂದ ಸಾಕಷ್ಟು ಪಾಠವನ್ನು ಕಲಿತಿದ್ದೇವೆ. ಕೋವಿಡ್ 3 ನೇ ಅಲೆ ಬರಬಾರದು. ಬಂದರೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಆಕ್ಸಿಜನ್ ಮಹತ್ವವನ್ನು ಕೋವಿಡ್ ಸಂದರ್ಭದಲ್ಲಿ ಅರಿತೆವು. ದಿನನಿತ್ಯದ ಆಹಾರದಲ್ಲಿನ ಮಹತ್ವವನ್ನು ಅರಿತು, ಪೌಷ್ಠಿಕ ಆಹಾರವನ್ನು ಪಡೆದುಕೊಂಡರೆ, ನಮ್ಮ ದೇಹದ ವ್ಯವಸ್ಥೆ ಸುಧಾರಿಸುತ್ತದೆ. ಏನಾದರೂ ಕೊರತೆಯಾದಾಗ ಮಾತ್ರ ನಮಗೆ ಅದರ ಮಹತ್ವ ತಿಳಿಯುತ್ತದೆ. ಜಯನಗರ ಟಿ. ಬ್ಲಾಕ್ ಆಸ್ಪತ್ರೆ ಕೊರತೆಯಾದ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದು, ಎಲ್ಲಾರೂ ಈ ಆಸ್ಪತ್ರೆಗೆ ಸಹಾಯ ಮಾಡಿದ್ದಾರೆ. ಇದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಇಲ್ಲಿನ ಸಿಬ್ಬಂದಿಯದ್ದು.

ನಿಖರವಾಗಿ ಯಾರದ್ದು ಯಾವ ಜವಾಬ್ದಾರಿ ಎನ್ನುವುದನ್ನು ಗುರುತಿಸಬೇಕು ಎಂದು ತಿಳಿಸಿದರು.

ಈ ಕೆಲಸವನ್ನು ಇತರರು ಅನುಕರಿಸಬೇಕು. ಕೊಡುಗೆ ನೀಡಿದ ಎಲ್ಲಾ ಸಂಸ್ಥೆಗಳನ್ನು ಅಭಿನಂದಿಸುತ್ತೇನೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂದಿರುಗಿಸಬೇಕು. ಆಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಪ್ರವೃತ್ತಿಗಿಂತ ಕೊಡುವುದನ್ನು ರೂಢಿಸಿಕೊಳ್ಳಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಸರ್ಕಾರ ಉತ್ಸುಕವಾಗಿರುವುದಾಗಿ ತಿಳಿಸಿದರು.

ಜಯನಗರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವುದಾಗಿ ಭರವಸೆಯಿತ್ತರು. ಬೆಂಗಳೂರಿನ ಆರೋಗ್ಯ ವ್ಯವಸ್ಥೆ ಒಂದೇ ಪ್ರಾಧಿಕಾರಡಾಡಿಗೆ ಬರಬೇಕು ಎನ್ನುವ ಚಿಂತನೆ ಇದೆ. ಬೆಂಗಳೂರಿಗೆ ಯೋಜಿತ ಬೆಳವಣಿಗೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು. ಜನಸಾಮಾನ್ಯರಿಗೆ ಸೇವೆಗಳು ಸುಲಭವಾಗಿ ದೊರೆಯಬೇಕು. ಬೆಂಗಳೂರಿನಲ್ಲಿ ಮೆಗಾ ಯೋಜನೆಗಳು ಶೀಘ್ರದಲ್ಲಿಯೇ ಕಾರ್ಯಗತಗೊಳಿಸಿ ಇನ್ನಷ್ಟು ವಾಸಯೋಗ್ಯವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಂಸದ ತೇಜಸ್ವಿ ಸೂರ್ಯ, ಶಾಸಕಿ ಸೌಮ್ಯ ರೆಡ್ಡಿ, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here