Home ಶಿಕ್ಷಣ ಆಫ್‌ಲೈನ್‌ ತರಗತಿ ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ಡಿಸಿಎಂ

ಆಫ್‌ಲೈನ್‌ ತರಗತಿ ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ಡಿಸಿಎಂ

97
0

ಬೆಂಗಳೂರು:

ಕೋವಿಡ್‌ ಕಾರಣಕ್ಕೆ ಪದವಿ ಕೋರ್ಸುಗಳ ಆಫ್‌ಲೈನ್‌ ತರಗತಿಗಳು ನಿಲ್ಲುವುದಿಲ್ಲ ಹಾಗೂ ಪರೀಕ್ಷೆಗಳು ಕೂಡ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಕೋವಿಡ್‌ ಎರಡನೇ ಅಲೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಉನ್ನತ ಶಿಕ್ಷಣ ವಿಭಾಗದ ಪರಿಸ್ಥಿತಿಯನ್ನು ಅವಲೋಕನ ನಡೆಸಿದ ಅವರು; ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿವೆ. ಸರಕಾರ ಹೊರಡಿಸಿರುವ ಮಾದರಿ ವೇಳಾಪಟ್ಟಿಯಂತೆ ವಿಶ್ವವಿದ್ಯಾಲಯಗಳು ನಿಗದಿಪಡಿಸಿರುವ ವೇಳಾಪಟ್ಟಿ ಅನುಸಾರ ಹಾಲಿ ನಡೆಯುತ್ತಿರುವ ಆಫ್‌ʼಲೈನ್‌ ತರಗತಿಗಳನ್ನು ಹಾಗೆಯೇ ಮುಂದುವರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಹಾಗೂ ಮಹಾವಿದ್ಯಾಲಯಗಳಿಗೆ ಸೂಚನೆ ನೀಡಲಾಯಿತು ಎಂದು ಡಿಸಿಎಂ ಅವರು ಮಾಹಿತಿ ನೀಡಿದರು.

ವಿಶ್ವವಿದ್ಯಾಲಯಗಳು, ಕಾಲೇಜುಗಳು,  ಪಾಲಿಟೆಕ್ನಿಕ್‌ಗಳು ಮತ್ತು ಇನ್ನಿತರೆ ಶಿಕ್ಷಣ ಸಂಸ್ಥೆಗಳಲ್ಲಿ 2020-21ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಎರಡನೇ ಅಲೆ ಬೀರುವ ಪರಿಣಾಮಗಳ  ಮಹತ್ವದ ಸಮಾಲೋಚನೆ ನಡೆಸಿದ್ದೇನೆ. ಮುಖ್ಯಮಂತ್ರಿ ಜತೆಗೂ ಚರ್ಚಿಸಿದ್ದೇನೆ. ಇಲ್ಲಿಯವರೆಗೆ ಆನ್‌ಲೈನ್ ಮತ್ತು ಆಫ್ ಲೈನ್ ತರಗತಿಗಳನ್ನು ನಡೆಸಿರುವ ಬಗ್ಗೆ ಹಾಗೂ ಈಗ ನಡೆಯುತ್ತಿರುವ ಹೈಯ್ಯರ್‌ ಸೆಮಿಸ್ಟರ್‌ ಪರೀಕ್ಷೆಗಳ ಬಗ್ಗೆ ಮತ್ತು ನಡೆಯಬೇಕಾದ ಲೋಯರ್‌ ಸೆಮಿಸ್ಟರ್‌ ಪರೀಕ್ಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಎಲ್ಲಾ ವಿಶ್ವವಿದ್ಯಾಲಯಗಳಿಂದ ಪಡೆದ ಮಾಹಿತಿಯನ್ನು ಪರಾಮರ್ಶಿಸಲಾಯಿತು ಎಂದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ನಡೆಸುತ್ತಿರುವ ಹಾಸ್ಟೆಲ್‌ಗಳನ್ನು ಮುಂದುವರಿಸಲು ಆಯಾ ಇಲಾಖೆಗಳನ್ನು ಕೋರಲಾಗುವುದು. ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ, ಮಹಾವಿದ್ಯಾಲಯಗಳಲ್ಲಿ  ಹಾಗೂ ಹಾಸ್ಟೆಲ್‌ʼಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಸಿಎಂ ಸೂಚಿಸಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ  ಮುಖ್ಯ ಕಾರ್ಯದರ್ಶಿ ಕುಮಾರನಾಯಕ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here