ವಿಕಾಸಸೌಧದಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೊಂದಿಗೆ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ
ಬೆಂಗಳೂರು:
ಕೋವಿಡ್ ಸಾಂಕ್ರಾಮಿಕ ದ ಸಂಕಷ್ಟದಿಂದ ಇತ್ತೀಚೆಗೆ ಚೇತರಿಸಿಕೊಳ್ಳುತ್ತಿರುವ ಕೈಗಾರಿಕೆಗಳ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗಾಧ ಪ್ರಮಾಣದ ಸಮ್ಮತಿ ಶುಲ್ಕವನ್ನು ವಿಧಿಸಿರುವುದು ಸರಿಯಲ್ಲ. ಈ ಶುಲ್ಕವನ್ನು ಹೆಚ್ಚಿಸುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಾಸಸೌಧದಲ್ಲಿಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ ಯೋಗಿಶ್ವರ್ ಅವರೊಂದಿಗೆ ಜಂಟಿಯಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಪರಿಸರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ 12. 11. 2020 ರಂದು ಹೊರಡಿಸಿರುವ ಪ್ರಸ್ತಾವನೆಯಲ್ಲಿ ಸಮ್ಮತಿ ಶುಲ್ಕವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೈಗಾರಿಕೆಗಳನ್ನು ನಡೆಸಲು ಹಾಗೂ ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸಲು ತೊಂದರೆ ಆಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯದ ಹಲವಾರು ಕಂಪನಿಗಳು ಹಾಗೂ ಕೈಗಾರಿಕಾ ಸಂಘಗಳು ಮನವಿಯನ್ನು ನೀಡಿದ್ದವು. ಯಾವುದೇ ಶುಲ್ಕವನ್ನು ಹೆಚ್ಚು ಮಾಡುವ ಸಂಧರ್ಭದಲ್ಲಿ ಆಗಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ. ಕೋವಿಡ್ ನಂತರ ನಿಧಾನವಾಗಿ ಕೈಗಾರಿಕೆಗಳ ಚೇತರಿಸಿಕೊಳ್ಳುತ್ತಿವೆ. ಅಲ್ಲದೆ, ನೂತನ ಕೈಗಾರಿಕೆಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗುತ್ತಿವೆ. ಇಂತಹ ಸಂಧರ್ಭಲ್ಲಿ ಅಗಾಧ ಪ್ರಮಾಣದಲ್ಲಿ ಶುಲ್ಕವನ್ನು ಹೆಚ್ಚಿಸುವುದು ಸರಿಯಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಸ್ತಾಪವನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬಹಳಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹಲವಾರು ಕೈಗಾರಿಕೆಗಳು ಬಂಡವಾಳ ಹೂಡಲು ಮುಂದಾಗುತ್ತಿರುವ ಸಂಧರ್ಭದಲ್ಲಿ ಇಂತಹ ಪ್ರಸ್ತಾವನೆಗಳು ಬೇರೆಯದ್ದೇ ಆದ ರೀತಿಯ ಸಂದೇಶವನ್ನು ರವಾನಿಸುತ್ತವೆ. ಕೈಗಾರಿಕೆಗಳು ಹಾಗೂ ಬಂಡವಾಳ ಆಕರ್ಷಣೆ ಹೆಚ್ಚಿಸಲು ಈ ಶುಲ್ಕದ ಬಗ್ಗೆ ಮರುಪರಿಶೀಲಿಸಿ ರಾಜ್ಯದಲ್ಲಿ ಪ್ರಸ್ತುತ ಇರುವ ಕೈಗಾರಿಕೆಗಳಿಗೆ ಅನುಕೂಲ ವಾಗುವಂತಹ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗೌರವ್ ಗುಪ್ತಾ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಂದೀಪ ದವೆ, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣಾ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.