ರಾಮನಗರ ನಗರಸಭೆಯನ್ನು ಪಾಲಿಕೆ ಮಾಡುತ್ತೇವೆ ಎಂದ HDK
ಚನ್ನಪಟ್ಟಣ/ರಾಮನಗರ: ಮುಂದೊಂದು ದಿನ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ರಾಮನಗರ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ವಿಠ್ಠಲೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಕೇಂದ್ರ ಸಚಿವರು; ಈ ಸರ್ಕಾರದ ಆಡಳಿತದ ಬಗ್ಗೆ ಜನರು ರೋಸಿ ಹೋಗಿದ್ದಾರೆ. ಈ ಭೂಮಿಗಳನ್ನು ಲೂಟಿ ಹೊಡೆಯುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುತ್ತೇವೆ ಎಂದು ಕೆಲವರು ಹೊರಟಿದ್ದಾರೆ. ನಾವೆಲ್ಲಾ ಈ ನೆಲದ ಮಕ್ಕಳು, ಮಣ್ಣು ನಂಬಿಕೊಂಡು ಜೀವನ ಮಾಡುವವರು. ಮಣ್ಣು ಮಾರಿಕೊಂಡು ಬದುಕುವ ಜನ ನಾವಲ್ಲ ಎಂದರು.
ಚನ್ನಪಟ್ಟಣ ಹಾಗೂ ರಾಮನಗರಗಳನ್ನು ಅವಳಿ ನಗರಗಳನ್ನಾಗಿ ಹುಬ್ಬಳ್ಳಿ – ಧಾರವಾಡದಂತೆ ಅಭಿವೃದ್ಧಿ ಮಾಡಲಾಗುವುದು. ಚನ್ನಪಟ್ಟಣ ಮಾದರಿ ವಿಧಾನಸಭೆ ಕ್ಷೇತ್ರವನ್ನಾಗಿ ರೂಪಿಸಿ ಶೈಕ್ಷಣಿಕ, ಆರ್ಥಿಕ ಹಾಗೂ ಕೈಗಾರಿಕಾ ಹಬ್ ಅನ್ನಾಗಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ವಿಠ್ಠಲೇನಹಳ್ಳಿ ಮತ್ತು ದೇವೆಗೌಡರ ಬಾಂಧವ್ಯ ಸ್ಮರಿಸಿದ ಸಚಿವರು
ವಿಠ್ಠಲೇನಹಳ್ಳಿ ಗ್ರಾಮದ ಜತೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಹೊಂದಿರುವ ಬಾಂಧವ್ಯವನ್ನು ಸ್ಮರಿಸಿದ ಕುಮಾರಸ್ವಾಮಿ ಅವರು, ವಿಶೇಷವಾಗಿ ಗ್ರಾಮಸ್ಥರಿಗೆ ಅಭಿವಂದನೆ ಸಲ್ಲಿಸಿದರು.
ಅಲ್ಲದೆ, ಈ ಗ್ರಾಮದಿಂದ ದೇವೆಗೌಡರು ಬೆಂಗಳೂರುವರೆಗೂ ನಡೆಸಿದ ಪಾದಯಾತ್ರೆಯನ್ನು ನೆನಪು ಮಾಡಿಕೊಂಡರು.