Home ರಾಮನಗರ ಭೈರತಿ ಸುರೇಶ್ ಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ HDK | ಉಕ್ಕು ಮಂತ್ರಿಯಾಗಿ ನಾನು...

ಭೈರತಿ ಸುರೇಶ್ ಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ HDK | ಉಕ್ಕು ಮಂತ್ರಿಯಾಗಿ ನಾನು ದುಡ್ಡು ಪ್ರೀಂಟ್ ಮಾಡ್ತಿನಾ?

15
0

ವಾಲ್ಮೀಕಿ ನಿಗಮದ ದುಡ್ಡು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ತೆಲಂಗಾಣ, ಬಳ್ಳಾರಿ ಎಲೆಕ್ಷನ್ ಗೆ ಬಳಸಿದ್ದು ಕಾಂಗ್ರೆಸ್

ಚನ್ನಪಟ್ಟಣ/ರಾಮನಗರ: ಚನ್ನಪಟ್ಟಣ ಉಪ ಚುನಾವಣೆಗೆ ಕುಮಾರಸ್ವಾಮಿ ಹಣ ತಂದು ಸುರಿಯುತ್ತಿದ್ದಾರೆ ಎಂದು ಆರೋಪ ಮಾಡಿರುವ ಸಚಿವ ಭೈರತಿ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು; ವಾಲ್ಮೀಕಿ ನಿಗಮದಲ್ಲಿದ್ದ ಪರಿಶಿಷ್ಟರ ಹಣವನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಸಿದ್ಧಯ್ಯಗೌಡ ದೊಡ್ಡಿ ಗ್ರಾಮದಲ್ಲಿ ಮಾಧ್ಯಮಗಳು ಈ ಬಗ್ಗೆ ಗಮನ ಸೆಳೆದಾಗ ಸಚಿವರು ಮೇಲಿನಂತೆ ಉತ್ತರಿಸಿದರು.

ಕೇಂದ್ರ ಸರ್ಕಾರದ ಉಕ್ಕು ಮಂತ್ರಿಯಾಗಿ ಪುತ್ರನ ಎಲೆಕ್ಷನ್ ಗೆ ಕುಮಾರಸ್ವಾಮಿ ಅವರು ಹಣ ಸುರಿಯುತ್ತಾರೆ ಎಂದು ಅವರು ಹೇಳಿದ್ದಾರೆ, ಅಲ್ಲವೇ? ಸುರೇಶ್ ಅವರಿಗೆ ನಾನು ಹೇಳಲು ಬಯಸುತ್ತೇನೆ, ಉಕ್ಕು ಮಂತ್ರಿಯಾಗಿ ನಾನು ದುಡ್ಡು ಪ್ರೀಂಟ್ ಮಾಡ್ತಿನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಕಳೆದ ಲೋಕಸಭೆ ಚುನಾವಣೆ ವೇಳೆ ವಾಲ್ಮಿಕಿ ನಿಗಮದಲ್ಲಿ ₹82 ಕೋಟಿ ಲೂಟಿ ಮಾಡಿದ್ದಾರೆ‌. ಅದೇ ಹಣದಲ್ಲಿ ಬಳ್ಳಾರಿ ಲೋಕಸಭೆ ಚುನಾವಣೆ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನುವುದು ಕೂಡ ಗೊತ್ತಿದೆ. ಯಾವ ನೈತಿಕತೆ ಇಟ್ಟುಕೊಂಡು ಹಣದ ಬಗ್ಗೆ ಮಾತನಾಡುತ್ತಾರೆ‌. ಅಪಪ್ರಚಾರ ಮಾಡೋದು ಕಾಂಗ್ರೆಸ್‌ನವರ ಚಾಳಿ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಚನ್ನಪಟ್ಟಣದಲ್ಲಿ ಮತದಾರರು ಜೆಡಿಎಸ್ ಬಗ್ಗೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ಬಿಜೆಪಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಆಗುತ್ತಿಲ್ಲ. ಕಾಂಗ್ರೆಸ್ ನಾಯಕರು ಏನೇ ಕುತಂತ್ರ ಮಾಡಿದರೂ ಮತದಾರರು ಎನ್‌ಡಿ‌ಎ ಕೂಟಕ್ಕೆ ಮತ ಹಾಕುತ್ತಾರೆ‌‌ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಿಯಾಂಕಾ ಗಾಂಧಿಗೂ ವಯನಾಡಿಗೂ ಏನು ಸಂಬಂಧ?

ವಲಸೆಗಾರರಿಗೆ ಬಿಟ್ಟು ಕೆಲಸಗಾರರಿಗೆ ಓಟ್ ಕೊಡಿ ಎಂದು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಕರೆದುಕೊಂಡು ಬಂದು ಈಗ ವಯನಾಡು ಕ್ಷೇತ್ರದಲ್ಲಿ ನಿಲ್ಲಿಸಿದ್ದಾರೆ. ಅವರಿಗೂ ವಯನಾಡಿಗೆ ಏನು ಸಂಬಂಧ? ರಾಮನಗರ ನನ್ನ ಕರ್ಮಭೂಮಿ, ನನಗೆ ರಾಜಕೀಯ ಜನ್ಮ ಕೊಟ್ಟ ಪುಣ್ಯಭೂಮಿ. ನಾನು ಮಣ್ಣಾಗುವುದೇ ರಾಮನಗರದ ಕೇತಿಗಾನಹಳ್ಳಿಯ ಮಣ್ಣಿನಲ್ಲಿ. ನಾನು ಹುಟ್ಟಿದ್ದು ಹಾಸನದಲ್ಲಿ, ನನ್ನ ಸಂಪೂರ್ಣವಾದ ಬದುಕು ರಾಮನಗರ ಜಿಲ್ಲೆಯಲ್ಲಿ ಎಂದರು.

ದೆಹಲಿಯಲ್ಲಿ ಜನಿಸಿರುವ ಇಟಲಿ ತಾಯಿಯ ಮಗಳು ವೈನಾಡಿನಲ್ಲಿ ನಿಲ್ಲಿಸಬಹುದು. ನಾನು ಕನ್ನಡಿಗ, ನಾನು ವಲಸಿಗ ಹೇಗಾಗುತ್ತೇನೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

LEAVE A REPLY

Please enter your comment!
Please enter your name here