ಆನ್ಲೈನ್ ಶಾಪಿಂಗ್ ನಿಯಮ ಬಿಗಿ: ಜನವರಿ 1ರಿಂದ 30 ದಿನಗಳ ಕನಿಷ್ಠ ಬೆಲೆ, ಪ್ರಾಯೋಜಿತ ಪಟ್ಟಿಗಳು ಮತ್ತು ಡಾರ್ಕ್ ಪ್ಯಾಟರ್ನ್ ಅನುಸರಣೆ ಬಹಿರಂಗ ಕಡ್ಡಾಯ
ನವದೆಹಲಿ, ಸೆಪ್ಟೆಂಬರ್ 10: ಆನ್ಲೈನ್ ಖರೀದಿದಾರರಿಗೆ ರಿಯಾಯಿತಿ, ಪ್ರಾಯೋಜಿತ ಹುಡುಕಾಟ ಫಲಿತಾಂಶಗಳು ಮತ್ತು ಗ್ರಾಹಕರನ್ನು ದಾರಿ ತಪ್ಪಿಸಬಹುದಾದ ಡಿಜಿಟಲ್ ವಿಧಾನಗಳ ಕುರಿತು ಹೆಚ್ಚಿನ ಪಾರದರ್ಶಕತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಕಾಮರ್ಸ್ ನಿಯಮಗಳನ್ನು ತಿದ್ದುಪಡಿ ಮಾಡಿದೆ. 2027ರ ಜನವರಿ 1ರಿಂದ ಬೆಲೆ ಇಳಿಕೆ ಘೋಷಿಸುವಾಗ ಹಿಂದಿನ 30 ದಿನಗಳಲ್ಲಿ ಆ ವಸ್ತು ಅಥವಾ ಸೇವೆಗೆ ಇದ್ದ ಕನಿಷ್ಠ ಬೆಲೆಯನ್ನು ಬಹಿರಂಗಪಡಿಸುವುದು, ಪ್ರಾಯೋಜಿತ ಪಟ್ಟಿಗಳನ್ನು ಸ್ಪಷ್ಟವಾಗಿ ಗುರುತಿಸುವುದು ಮತ್ತು ಡಾರ್ಕ್ ಪ್ಯಾಟರ್ನ್ಗಳ ಕುರಿತು ವಾರ್ಷಿಕ ಸ್ವಯಂ ಪರಿಶೀಲನೆ ನಡೆಸುವುದು ಕಡ್ಡಾಯವಾಗಲಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು Consumer Protection (E-Commerce) (Amendment) Rules, 2026 ಮೂಲಕ Consumer Protection (E-Commerce) Rules, 2020ಕ್ಕೆ ತಿದ್ದುಪಡಿ ಮಾಡಿದ್ದು, ಗ್ರಾಹಕರ ದೂರುಗಳು, ಹುಡುಕಾಟ ಫಲಿತಾಂಶಗಳು, ಬೆಲೆ ಇಳಿಕೆ, ಮಾರಾಟಗಾರರು ಮತ್ತು ಉತ್ಪನ್ನಗಳ ಮಾಹಿತಿ, ಗ್ರಾಹಕರ ದತ್ತಾಂಶ, ಒಟ್ಟುಗೂಡಿಸಿದ ಶುಲ್ಕಗಳು ಹಾಗೂ ಆಮದು ವಸ್ತುಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಹೊಸ ನಿಯಮಗಳ ಪ್ರಮುಖ ಅಂಶಗಳಲ್ಲಿ ಆನ್ಲೈನ್ ರಿಯಾಯಿತಿಗಳ ಪ್ರದರ್ಶನವೂ ಸೇರಿದೆ. ಇ-ಕಾಮರ್ಸ್ ಸಂಸ್ಥೆಯೊಂದು ಬೆಲೆ ಇಳಿಕೆಯನ್ನು ಘೋಷಿಸಿದಾಗ ಕಡಿತಗೊಂಡ ಬೆಲೆ ಮತ್ತು ಹಿಂದಿನ ಬೆಲೆ ಎರಡನ್ನೂ ಪ್ರದರ್ಶಿಸಬೇಕು. ತಿದ್ದುಪಡಿ ನಿಯಮಗಳ ಪ್ರಕಾರ, ‘ಹಿಂದಿನ ಬೆಲೆ’ ಎಂದರೆ ಬೆಲೆ ಇಳಿಕೆ ಘೋಷಣೆಗೆ ಮುನ್ನದ 30 ದಿನಗಳಲ್ಲಿ ಆ ವಸ್ತು ಅಥವಾ ಸೇವೆಯನ್ನು ನೀಡಲಾಗಿದ್ದ ಅತ್ಯಂತ ಕಡಿಮೆ ಬೆಲೆ.
ಇದರಿಂದ ಗ್ರಾಹಕರು ಆನ್ಲೈನ್ನಲ್ಲಿ ಪ್ರಕಟವಾಗುವ ರಿಯಾಯಿತಿಯನ್ನು ಮೌಲ್ಯಮಾಪನ ಮಾಡುವಾಗ ಕೇವಲ ಪ್ರದರ್ಶಿಸಲಾದ ಹೋಲಿಕೆ ಬೆಲೆಯ ಮೇಲೆ ಅವಲಂಬಿಸದೆ, ಹಿಂದಿನ 30 ದಿನಗಳ ಕನಿಷ್ಠ ಬೆಲೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಾಗಲಿದೆ.
ಆನ್ಲೈನ್ ಹುಡುಕಾಟ ಫಲಿತಾಂಶಗಳ ಮೇಲೂ ಹೊಸ ನಿಯಮಗಳು ನಿರ್ಬಂಧ ವಿಧಿಸುತ್ತವೆ. ಬಳಕೆದಾರರನ್ನು ದಾರಿ ತಪ್ಪಿಸುವ ಅಥವಾ ಅವರ ಹುಡುಕಾಟ ಪ್ರಶ್ನೆಗೆ ಸಂಬಂಧಿಸಿದ ಫಲಿತಾಂಶಗಳ ಪ್ರಸ್ತುತತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರೀತಿಯಲ್ಲಿ ಇ-ಕಾಮರ್ಸ್ ಸಂಸ್ಥೆಗಳು ಹುಡುಕಾಟ ಫಲಿತಾಂಶಗಳನ್ನು ತಿರುಚುವಂತಿಲ್ಲ.
ಹಣ ಪಾವತಿಸಿ ಪ್ರದರ್ಶಿಸಲಾಗುವ ಅಥವಾ ಪ್ರಾಯೋಜಿತ ಪಟ್ಟಿಗಳನ್ನು ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ ಗುರುತಿಸಬೇಕು. ಇದರಿಂದ ಗ್ರಾಹಕರು ಸಾಮಾನ್ಯ ಹುಡುಕಾಟ ಫಲಿತಾಂಶ ಮತ್ತು ವಾಣಿಜ್ಯ ಉದ್ದೇಶದ ಪ್ರಾಯೋಜಿತ ಪಟ್ಟಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಲಿದೆ.
ಡಾರ್ಕ್ ಪ್ಯಾಟರ್ನ್ಗಳ ಅನುಸರಣೆಯನ್ನೂ ಸರ್ಕಾರ ಇ-ಕಾಮರ್ಸ್ ನಿಯಂತ್ರಣ ವ್ಯವಸ್ಥೆಯ ಭಾಗವನ್ನಾಗಿ ಮಾಡಿದೆ. ಇ-ಕಾಮರ್ಸ್ ಸಂಸ್ಥೆಗಳು Guidelines for Prevention and Regulation of Dark Patterns, 2023 ಅನ್ನು ಪಾಲಿಸಬೇಕು, ಪ್ರತಿ ವರ್ಷ ಸ್ವಯಂ ಪರಿಶೀಲನೆ ನಡೆಸಬೇಕು ಮತ್ತು ಅನುಸರಣೆ ಪ್ರಮಾಣಪತ್ರವನ್ನು ಪ್ರಮುಖವಾಗಿ ಪ್ರದರ್ಶಿಸಬೇಕು.
ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆಯೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯ (NCH) convergence ಪ್ರಕ್ರಿಯೆಯಲ್ಲಿ ಪಾಲುದಾರರಾಗುವುದು ಕಡ್ಡಾಯವಾಗಲಿದೆ. ಇದರ ಮೂಲಕ ಇ-ಕಾಮರ್ಸ್ ವೇದಿಕೆಗಳು ಮತ್ತು ರಾಷ್ಟ್ರೀಯ ಗ್ರಾಹಕ ದೂರು ಪರಿಹಾರ ವ್ಯವಸ್ಥೆಯ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.
2025ರಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಒಟ್ಟು 17,71,622 ದೂರುಗಳು ಬಂದಿದ್ದು, ಅವುಗಳಲ್ಲಿ 5,11,196 ಅಂದರೆ ಸುಮಾರು ಶೇ.29ರಷ್ಟು ದೂರುಗಳು ಇ-ಕಾಮರ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ್ದವು ಎಂದು ಸರ್ಕಾರ ತಿಳಿಸಿದೆ.
ದೂರು ನಿರ್ವಹಣೆಯಲ್ಲಿಯೂ ಹೊಸ ನಿಯಮವನ್ನು ಸೇರಿಸಲಾಗಿದೆ. ಇ-ಕಾಮರ್ಸ್ ಸಂಸ್ಥೆಯ ದೂರು ಪರಿಹಾರ ಅಧಿಕಾರಿ ದಾಖಲಿಸಿದ ದೂರಿನ ಪ್ರತಿಯನ್ನು ದೂರುದಾರರಿಗೆ ನೀಡುವುದು ಕಡ್ಡಾಯವಾಗಲಿದೆ.
ಮಾರ್ಕೆಟ್ಪ್ಲೇಸ್ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರು ಮಾಹಿತಿ ಆಧಾರಿತ ಖರೀದಿ ನಿರ್ಧಾರ ಕೈಗೊಳ್ಳಲು ಅಗತ್ಯವಾದ ಪ್ರಮುಖ ಮಾರಾಟಗಾರ ಮತ್ತು ಉತ್ಪನ್ನ ಮಾಹಿತಿಯನ್ನು ಒದಗಿಸಬೇಕು. ಇದರಲ್ಲಿ best before/use before ದಿನಾಂಕ, ವಾಪಸ್ ನೀಡುವಿಕೆ ಮತ್ತು ಹಣ ಮರುಪಾವತಿ, ವಾರಂಟಿ, ವಿತರಣೆ ಹಾಗೂ ಪಾವತಿಗೆ ಸಂಬಂಧಿಸಿದ ವಿವರಗಳು ಸೇರಿವೆ.
ಆಮದು ವಸ್ತುಗಳ ವಿಷಯದಲ್ಲಿ ಆಮದುದಾರರ ವಿವರ ಮತ್ತು ಉತ್ಪನ್ನದ ಮೂಲ ದೇಶದ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯವಾಗಲಿದೆ.
ಗ್ರಾಹಕರ ಮಾಹಿತಿಯ ಬಳಕೆಯ ಮೇಲೂ ತಿದ್ದುಪಡಿ ನಿಯಮಗಳು ನಿರ್ಬಂಧ ವಿಧಿಸಿವೆ. ನಿರ್ದಿಷ್ಟ ಉದ್ದೇಶಗಳಿಗೆ ಗ್ರಾಹಕರ ಮಾಹಿತಿಯನ್ನು ಬಳಸುವ ಮೊದಲು ಮಾರ್ಕೆಟ್ಪ್ಲೇಸ್ ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರ ಸ್ಪಷ್ಟ ಮತ್ತು ಸಕಾರಾತ್ಮಕ ಒಪ್ಪಿಗೆಯನ್ನು ಪಡೆಯಬೇಕು.
ಸಂಬಂಧವಿಲ್ಲದ ಸೇವೆಗಳ ಶುಲ್ಕಗಳನ್ನು ಒಟ್ಟುಗೂಡಿಸಿ ವಸೂಲಿ ಮಾಡುವ ಪದ್ಧತಿಯ ಮೇಲೂ ನಿಯಂತ್ರಣ ಹೇರಲಾಗಿದೆ. ಇ-ಕಾಮರ್ಸ್ ವೇದಿಕೆಗೆ ಸಂಬಂಧಿಸದ ಸೇವೆಗಳಿಗಾಗಿ bundled fees ವಸೂಲಿ ಮಾಡುವಂತಿಲ್ಲ. ಆದರೆ ನಿರ್ದಿಷ್ಟಪಡಿಸಿದ loyalty ಅಥವಾ membership ಕಾರ್ಯಕ್ರಮಗಳಿಗೆ ವಿನಾಯಿತಿ ಇರಲಿದೆ.
ಡಿಜಿಟಲ್ ಮಾರುಕಟ್ಟೆಯಲ್ಲಿ ಹೊರಹೊಮ್ಮುತ್ತಿರುವ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ Ease of Doing Business ಅನ್ನು ಪರಿಗಣಿಸಿ, ಇ-ಕಾಮರ್ಸ್ ಸಂಸ್ಥೆಗಳ ಮೇಲೆ ಅನಗತ್ಯ ನಿಯಂತ್ರಣ ಭಾರ ಹೇರದ ಸಮತೋಲಿತ ವ್ಯವಸ್ಥೆ ರೂಪಿಸುವುದು ಈ ತಿದ್ದುಪಡಿಗಳ ಉದ್ದೇಶ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.
Consumer Protection Act, 2019ರ ಅಡಿಯಲ್ಲಿ ರೂಪಿಸಲಾದ Consumer Protection (E-Commerce) Rules, 2020 ಇ-ಕಾಮರ್ಸ್ ಕ್ಷೇತ್ರದಲ್ಲಿನ ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಗ್ರಾಹಕರನ್ನು ರಕ್ಷಿಸುವ ನಿಯಂತ್ರಣ ಚೌಕಟ್ಟನ್ನು ಒದಗಿಸುತ್ತವೆ. ಬದಲಾಗುತ್ತಿರುವ ವ್ಯಾಪಾರ ಮಾದರಿಗಳು, ಡಿಜಿಟಲ್ ಪದ್ಧತಿಗಳು ಮತ್ತು ಗ್ರಾಹಕರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಹೆಚ್ಚು ಪಾರದರ್ಶಕ, ಹೊಣೆಗಾರಿಕೆ ಹೊಂದಿರುವ ಮತ್ತು ಗ್ರಾಹಕ ಕೇಂದ್ರಿತ ಇ-ಕಾಮರ್ಸ್ ವ್ಯವಸ್ಥೆಯನ್ನು ರೂಪಿಸುವುದರ ಜೊತೆಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಉದ್ಯಮಗಳಿಗೆ ತಮ್ಮ ಜವಾಬ್ದಾರಿಗಳ ಕುರಿತು ಸ್ಪಷ್ಟತೆ ನೀಡುವುದು ಹಾಗೂ ಸಮಾನ ಸ್ಪರ್ಧಾತ್ಮಕ ವಾತಾವರಣ ನಿರ್ಮಿಸುವುದು ತಿದ್ದುಪಡಿಗಳ ಉದ್ದೇಶವಾಗಿದೆ.
Consumer Protection (E-Commerce) (Amendment) Rules, 2026ವು 2027ರ ಜನವರಿ 1ರಿಂದ ಜಾರಿಗೆ ಬರಲಿದೆ.
