ಬೆಂಗಳೂರು: ಪೋಕ್ಸೊ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಹಾಜರಾಗಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿದ್ದ ಡಿವೈಎಸ್ಪಿ ಪೃಥ್ವಿ ಬದಲಿಗೆ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಡಿವೈಎಸ್ಪಿ ಪುನೀತ್ ಮುಂದೆ ಯಡಿಯೂರಪ್ಪ ಹಾಜರಾಗಿದ್ದು, ಅಧಿಕಾರಿಗಳು ವಿಚಾರಣೆ ಕೈಗೊಂಡರು.
ಕಳೆದ ವಾರ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ನೊಟೀಸ್ ನೀಡಿತ್ತು. ಹೊಸದಿಲ್ಲಿಯಲ್ಲಿ ಇರುವುದಾಗಿ ಹೇಳಿದ್ದ ಅವರು, ಸೋಮವಾರ ಹಾಜರಾಗುವುದಾಗಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡನೇ ಬಾರಿ ನೊಟೀಸ್ ನೀಡಿತ್ತು. ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಮತ್ತೊಂದೆಡೆ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಜೂ.14ರ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ ಬಂಧಿಸದಂತೆ ಹೇಳಿ ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.