Home ಬೆಂಗಳೂರು ನಗರ ದಲಿತರ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ಸೇವೆಯಲ್ಲಿರಲು ನಾಲಾಯಕ್ : ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ...

ದಲಿತರ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ಸೇವೆಯಲ್ಲಿರಲು ನಾಲಾಯಕ್ : ಅಧಿಕಾರಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

17
0

ಬೆಂಗಳೂರು : ‘ಬಡವರು, ದಲಿತರ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ದರೆ ನೀವು ಸೇವೆಯಲ್ಲಿರಲು ನಾಲಾಯಕ್. ವಸತಿ ಶಾಲೆಗಳು ಬಡಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಬುದ್ಧಿವಂತರನ್ನು ಇನ್ನಷ್ಟು ಬುದ್ಧಿವಂತರಾಗಿಸುವುದು ಮಾತ್ರವಲ್ಲ, ಕಲಿಕೆಯಲ್ಲಿ ಹಿಂದುಳಿದವರನ್ನೂ ಬುದ್ಧಿವಂತರಾಗಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ಮೊತ್ತ 1,884ಕೋಟಿ ರೂ.ಗಳ ಪೈಕಿ 1,879ಕೋಟಿ ರೂ.ವೆಚ್ಚವಾಗಿದ್ದು, ಶೇ.99.75ರಷ್ಟು ಸಾಧನೆಯಾಗಿದೆ’ ಎಂದು ಹೇಳಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ 389 ವಿದ್ಯಾರ್ಥಿ ನಿಲಯಗಳು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು-39,541 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಿದ್ದು, 194.71 ಕೋಟಿ ರೂ.ಒದಗಿಸಲಾಗಿದೆ. ಎಸೆಸೆಲ್ಸಿ ಯಲ್ಲಿ ಶೇ.77ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸಬೇಕು ಎಂದು ಅವರು ನಿರ್ದೇಶಕ ನೀಡಿದರು.

ಹಾಸ್ಟೆಲ್‍ಗಳಿಗೆ ಸಂಜೆ ವೇಳೆಗೆ ಭೇಟಿ ನೀಡಿ, ಶುಚಿ ಕಿಟ್‍ಗಳು, ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು. ಕೆಲವು ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಮಕ್ಕಳು ರಾತ್ರಿ ಊಟವಾದ ನಂತರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳು ಎಂದು ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯ ಇದ್ದೂ, ಯಾಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಕುರಿತು ಪರಾಮರ್ಶೆ ನಡೆಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದೆ ಇದ್ದರೂ, ಹಾಸಿಗೆ, ಬೆಡ್‍ಶೀಟ್ ಮತ್ತಿತರ ವಸ್ತುಗಳನ್ನು ಅನಗತ್ಯವಾಗಿ ಖರೀದಿಸುವುದನ್ನು ಸಹಿಸಲಾಗದು. ಅನಗತ್ಯವಾಗಿ 4 ಜಿ ವಿನಾಯಿತಿ ಪಡೆಯುವ ಬದಲು ನೇರವಾಗಿ ಟೆಂಡರ್ ಕರೆದು ಖರೀದಿ, ಸೇವೆಗಳನ್ನು ಪಡೆಯಬೇಕೆಂದು ಎಂದು ಸಿಎಂ ಸೂಚನೆ ನೀಡಿದರು.

22 ಪ್ರಕರಣಗಳಲ್ಲಿ ಸಿಂಧುತ್ವ ಪ್ರಮಾಣ ಪತ್ರ ಹಲವು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇದ್ದು, ಇವುಗಳಲ್ಲಿ ಎಲ್ಲ ಪ್ರಕರಣಗಳನ್ನು ಸಿಆರ್ ಇ ಸೆಲ್‍ಗೆ ಕಳುಹಿಸದಂತೆ, ಗೊಂದಲವಿದ್ದಲ್ಲಿ ಮಾತ್ರ ಕಳುಹಿಸುವಂತೆ ಸುತ್ತೋಲೆ ಹೊರಡಿಸಬೇಕು ಎಂದರು.

ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಹಿರಿಯ ಕೆಎಎಸ್ ಅಧಿಕಾರಿಯನ್ನು ನಿರ್ದೇಶಕರಾಗಿ ನೇಮಕ ಮಾಡುವುದು ಸೂಕ್ತ ಎಂದು ಅಪರ ಮುಖ್ಯ ಕಾರ್ಯದರ್ಶಿ ಅಭಿಪ್ರಾಯಪಟ್ಟರು. ಹಿರಿಯ ಕೆ.ಎ.ಎಸ್. ಅಧಿಕಾರಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿ, ಮಾನವಶಾಸ್ತ್ರಜ್ಞರನ್ನು ಅವರ ಅಧೀನದಲ್ಲಿ ನೇಮಕಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿ, ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಕೇರಳ ಮಾದರಿಯಲ್ಲಿ ಆಡಳಿತ ಮತ್ತು ಸಂಶೋಧನಾ ವಿಭಾಗಗಳನ್ನು ಪ್ರತ್ಯೇಕವಾಗಿ ರಚಿಸುವ ಬಗ್ಗೆ ಅಥವಾ ಒಡಿಶಾ ರಾಜ್ಯದ ಮಾದರಿ ಏನು ಎಂದು ಮಾಹಿತಿ ತರಿಸಿ, ಪರಿಶೀಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು, ನಸೀರ್ ಅಹಮದ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಇಲಾಖೆಯ ಸೂಚನೆಯಂತೆ 2023-24ರಲ್ಲಿ ಲಭ್ಯವಿದ್ದ 263 ಕೋಟಿ ರೂ.ಖಜಾನೆಗೆ ಜಮಾ ಮಾಡಲಾಗಿದೆ. ಫಲಾನುಭವಿಗಳ ಸಂಖ್ಯೆ ಕಡಿಮೆ ಇರುವುದರಿಂದ ಸಂದಿಗ್ಧ ಸ್ಥಿತಿ ಎದುರಾಗಿದ್ದು, ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’

-ಸಿದ್ದರಾಮಯ್ಯ ಮುಖ್ಯಮಂತ್ರಿ

LEAVE A REPLY

Please enter your comment!
Please enter your name here