ಬೆಂಗಳೂರು/ದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಬಳಿಕ ಸತೀಶ್ ಜಾರಕಿಹೊಳಿ ರಾಜ್ಯ ಕಾಂಗ್ರೆಸ್ನ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಜಣ್ಣ, ಕೊಂಡರೆಡ್ಡಿ ಮತ್ತು ಬಸಂತಪ್ಪ ಸೇರಿದಂತೆ ಕೆಲ ಶಾಸಕರೊಂದಿಗೆ ಖರ್ಗೆ ಅವರನ್ನು ಭೇಟಿ ಮಾಡಿದ ಜಾರಕಿಹೊಳಿ, ರಾಜ್ಯದ ರಾಜಕೀಯ ಸನ್ನಿವೇಶ ಹಾಗೂ ಮುಂದಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ. ಪಕ್ಷದೊಳಗಿನ ಗೊಂದಲಗಳ ವಿಚಾರವನ್ನು ಖರ್ಗೆಯವರ ಗಮನಕ್ಕೆ ತಂದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
“ಗೊಂದಲಗಳ ಬಗ್ಗೆ ನಾವು ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವುದಾಗಿ ಖರ್ಗೆ ಹೇಳಿದ್ದಾರೆ. ಪಕ್ಷದ ಎಲ್ಲಾ ಶಾಸಕರು, ಮಂತ್ರಿಗಳು ಮತ್ತು ಕಾರ್ಯಕರ್ತರು ಸ್ಪಷ್ಟತೆಯನ್ನು ನಿರೀಕ್ಷಿಸುತ್ತಿದ್ದಾರೆ,” ಎಂದು ಜಾರಕಿಹೊಳಿ ಹೇಳಿದರು.
ಅಧಿಕಾರದ ಗೊಂದಲ ಮತ್ತು ಪದೇ ಪದೇ ಹೊರಬರುವ ಹೇಳಿಕೆಗಳು ಪಕ್ಷಕ್ಕೆ ತೊಂದರೆ ಉಂಟುಮಾಡುತ್ತಿವೆ ಎಂದು ಸೂಚಿಸಿದ ಅವರು, ಈ ವಿಷಯಕ್ಕೆ ಶೀಘ್ರ ಅಂತ್ಯ ಬರಬೇಕು ಎಂದು ಅಭಿಪ್ರಾಯಪಟ್ಟರು. ನಿರ್ಧಾರ ಯಾವಾಗ ಎಂಬುದನ್ನು ಸ್ಪಷ್ಟಪಡಿಸದಿದ್ದರೂ, “ಹೈಕಮಾಂಡ್ ಒಂದು ನಿರ್ಣಯಕ್ಕೆ ಬಂದಿದೆ” ಎಂಬ ಸೂಚನೆಯನ್ನು ನೀಡಿದರು.
ಬಜೆಟ್ ಅಧಿವೇಶನದ ಹಿನ್ನೆಲೆ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ನಡುವೆ ನಡೆದ ಈ ದೆಹಲಿ ಭೇಟಿ ಮಹತ್ವದ್ದಾಗಿ ಪರಿಗಣಿಸಲಾಗುತ್ತಿದೆ. ಪಕ್ಷದೊಳಗಿನ ಗೊಂದಲ ನಿವಾರಣೆಗೆ ಹೈಕಮಾಂಡ್ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
