Home ಶಿಕ್ಷಣ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಪೂರ್ಣ: ಸಚಿವ ಸುರೇಶ್ ಕುಮಾರ್

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಪೂರ್ಣ: ಸಚಿವ ಸುರೇಶ್ ಕುಮಾರ್

39
0
Advertisement
bengaluru

ಬೆಂಗಳೂರು:

ಜುಲೈ 19 ಮತ್ತು 22ರಂದು ನಿಗದಿಯಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸಿದ್ಧತೆಗಳ ಕುರಿತಂತೆ ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಸಿದ್ಧತೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ದೇಶಕರ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾರ್ಗದರ್ಶನ ನೀಡಿದ ಸಚಿವರು, ಯಾವುದೇ ಒಂದು ಮಗುವಿಗೂ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಗಳು ನಡೆದಿವೆ. ಡಿಸಿಗಳ ನೇತೃತ್ವದಲ್ಲಿ ಸಿಇಒ, ಎಸ್.ಪಿ ಡಿಎಚ್ಒ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆಗಳು ನಡೆದಿದ್ದು, ಪರೀಕ್ಷಾ ಸಿದ್ಧತೆ ಮತ್ತು ಎಸ್ಒಪಿ ಪಾಲನೆ ಕುರಿತಂತೆ ನಿರ್ದೇಶನ ನೀಡಿದ್ದು, ಆಯಾ ಮಟ್ಟದ ಅಧಿಕಾರಿಗಳು ಕ್ರಮ ವಹಿಸಿದ್ದಾರೆಂದು ಸಚಿವರು ಹೇಳಿದರು.

bengaluru bengaluru

ಮಕ್ಕಳಿಗೆ ಪರೀಕ್ಷಾಂಗಣ ಸುರಕ್ಷತೆ ಮತ್ತು ಆತ್ಮವಿಶ್ವಾಸದ ಭಾವಗಳನ್ನು ಮೂಡಿಸುವಂತೆ ಕ್ರಮ ವಹಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಈಗಾಗಲೇ ಒಎಂಆರ್ ಶೀಟ್ ಕುರಿತು ಹತ್ತಾರು ಬಾರಿ ತಿಳಿವಳಿಕೆ ಮೂಡಿಸಲಾಗಿದೆ. ಪರೀಕ್ಷಾ ಕೊಠಡಿಯಲ್ಲೂ ಪ್ರತಿ ವಿದ್ಯಾರ್ಥಿಗೂ ಕೊಠಡಿ ಮೇಲ್ವಿಚಾರಕರು ಈ ಕುರಿತು ಸೂಕ್ತ ಮಾರ್ಗದರ್ಶನ ನೀಡಲು ಸೂಚನೆ ನೀಡಲಾಗಿದೆ. ಯಾವುದೇ ರೀತಿಯಲ್ಲೂ ಗೊಂದಲವಾಗದಂತೆ ಗಮನ ಹರಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಪರೀಕ್ಷೆಗೂ ಎರಡು ದಿನಗಳ ಮೊದಲು ಪರೀಕ್ಷಾ ಪ್ರಕ್ರಿಯೆಗೆ ನೇಮಕವಾಗಿರುವ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಪರೀಕ್ಷಾ ಕೇಂದ್ರದಲ್ಲಿ ಅಣಕು ಪರೀಕ್ಷಾ ಪ್ರಕ್ರಿಯೆ ನಡೆಸಲಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್ ಪೂರೈಕೆ ಸೇರಿದಂತೆ ಎಲ್ಲ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು, ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಅಧೀಕ್ಷಕರು ಸೇರಿದಂತೆ ಅಗತ್ಯವಿರುವ ಎಲ್ಲ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದ್ದು, ಅವರೆಲ್ಲರಿಗೂ ತಂತಮ್ಮ ಕರ್ತವ್ಯದ ಪಟ್ಟಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿ ಓದಿ: ಪರೀಕ್ಷಾರ್ಥಿಗಳೇ… ಧೈರ್ಯವಾಗಿ ಪರೀಕ್ಷೆಗೆ ಬನ್ನಿ. ಆಲ್ ದ ಬೆಸ್ಟ್…

ಕಳೆದ ಬಾರಿಗಿಂತ ಹೆಚ್ಚಿನ ಸುರಕ್ಷಾ ವಾತಾವರಣದಲ್ಲಿ ಪರೀಕ್ಷೆಗಳು ನಡೆಯಲಿವೆ. ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸಂಪರ್ಕದಲ್ಲಿದ್ದು, ಪರೀಕ್ಷೆಗೆ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳನ್ನು ವಿವರಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆಗೆ ಕಳಿಸಲು ಉತ್ಸುಕರಾಗಿದ್ದಾರೆಂದು ಸಚಿವರು ತಿಳಿಸಿದರು. ಈಗಾಗಲೇ ತಾನು ಎಲ್ಲ ಡಿಡಿಪಿಐಗಳೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಎಲ್ಲರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಕೊನೆ ಕ್ಷಣದ ಸೂಚನೆಗಳನ್ನು ನೀಡಿದ್ದೇನೆ. ಪ್ರತಿಯೊಬ್ಬ ಅಧಿಕಾರಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದಾರೆ. ಯಾವುದೇ ಒಂದು ಮಗುವೂ ಸಹ ವಾಹನ ಸೌಲಭ್ಯವಿಲ್ಲದೇ ಪರೀಕ್ಷೆಗೆ ಗೈರು ಹಾಜರಾಗದಂತೆ ಗಮನಹರಿಸಲು ಕ್ರಮ ವಹಿಸಬೇಕೆಂದು ಸೂಚನೆಗಳನ್ನು ನೀಡಲಾಗಿದೆ. ಮಕ್ಕಳ ಪರೀಕ್ಷಾ ಪ್ರವೇಶ ಪತ್ರ ಪ್ರದರ್ಶಿಸಿ ಮಕ್ಕಳು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದೂ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅನೇಕ ಸಂಸ್ಥೆಗಳು, ಆಯಾ ಶಾಸಕರು, ಜನಪ್ರತಿನಿಧಿಗಳು ಆಯಾ ಭಾಗದ ಮಕ್ಕಳಿಗೆ ಪರೀಕ್ಷಾವಧಿ ನಂತರ ಅಲ್ಲಲ್ಲಿ ನೀರಿನ ಬಾಟಲ್ ಮತ್ತು ಬಿಸ್ಕತ್, ಬ್ರೆಡ್ ಸೇರಿದಂತೆ ಸಿದ್ದಪಡಿಸಿದ ಅಹಾರಗಳಂತಹ ಲುಘು ಉಪಹಾರ ವ್ಯವಸ್ಥೆ ಸಹ ಮಾಡಿದ್ದು, ಪರೀಕ್ಷೆಗೆ ಎಲ್ಲರ ಸಹಾಯ ಸಹಕಾರದ ಹಸ್ತ ಚಾಚಿದ್ದಾರೆ. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರವಾಗಿರಲಿವೆ. ಪರೀಕ್ಷೆಯು ಮಕ್ಕಳಿಗೆ ಸಂಭ್ರಮದ ಹಬ್ಬವಾಗಿರಲಿದೆ. ಪರೀಕ್ಷಾಂಗಣವನ್ನು ಕ್ರೀಡಾಂಗಣವೆಂದು ಭಾವಿಸಿ ಖುಷಿಯ ವಾತಾವರಣದಲ್ಲಿ ಪರೀಕ್ಷೆ ಬರೆಯಬೇಕೆಂದು ಸಚಿವರು ಮನವಿ ಮಾಡಿದ್ದಾರೆ.

ಎಸ್ಒಪಿ ಪಾಲನೆಯೊಂದಿಗೆ ಪರೀಕ್ಷೆಗೆ ಮೊದಲು ಮತ್ತು ನಂತರ ಪರೀಕ್ಷಾ ಕೇಂದ್ರದ ಆವರಣ ಮತ್ತು ಪರೀಕ್ಷಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಸಂಬಂಧಿಸಿದ ಅಧಿಕಾರಿಗಳು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಡಿಡಿಪಿಐ ಮತ್ತು ಬಿಇಒಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗಾಗಲೇ ಶೇ. 100ರಷ್ಟು ಪರೀಕ್ಷಾ ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದವರಷ್ಟೇ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆಂದು ಸಚಿವರು ತಿಳಿಸಿದರು.

ಹಾಲ್ ಟಿಕೆಟ್-ಬಿಇಒಗಳಿಗೆ ಸೂಚನೆ:

ಪೂರ್ಣ ಶುಲ್ಕ ಪಾವತಿಸದೇ ಇರುವುದರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಪ್ರವೇಶ ಪತ್ರ ನೀಡಲು ನಿರಾಕರಿಸಿರುವಂತಹ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ರೀತಿಯಲ್ಲೂ ಮಕ್ಕಳಿಗೆ ತೊಂದರೆಯಾಗದಂತೆ ಬಿಇಒಗಳು ಸೂಕ್ತ ಕ್ರಮ ವಹಿಸಲಿದ್ದಾರೆ. ಈ ಕುರಿತು ಯಾವುದೇ ಶಾಲೆಯೂ ಶುಲ್ಕ ಸಂಬಂಧದಲ್ಲಿ ಮಂಡಳಿ ಪರೀಕ್ಷೆಗೆ ಮಕ್ಕಳಿಗೆ ಪ್ರವೇಶ ಪತ್ರ ನಿರಾಕರಿಸದಂತೆ ಪರೀಕ್ಷಾ ಮಂಡಳಿ ಇಂದು ಅಗತ್ಯ ಸುತ್ತೋಲೆ ಹೊರಡಿಸಲಿದೆ ಎಂದು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here