ಮೇಕೆದಾಟು; ಡಿಎಂಕೆ ನಡೆ ಖಂಡಿಸಿದ ಹೆಚ್.ಡಿ.ದೇವೇಗೌಡರು
ಮೇಕೆದಾಟು ಕಟ್ಟುತ್ತೇವೆ ಎಂದು ಜೆಡಿಎಸ್ ಪ್ರಣಾಳಿಕೆಯಲ್ಲಿ ಹಾಕುತ್ತೇವೆ ಎಂದು ಗುಡುಗಿದ ಮಾಜಿ ಪ್ರಧಾನಿಗಳು
ಬಿಜೆಪಿ, ಕಾಂಗ್ರೆಸ್ ಸೇರಿ ರಾಜ್ಯದ ಎಲ್ಲಾ ಪಕ್ಷಗಳು ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಬೆಂಬಲಿಸಲಿ
ಬೆಂಗಳೂರು: ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ತನ್ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿಯೇ ವಿರೋಧಿಸಿರುವ ಡಿಎಂಕೆ ಪಕ್ಷದ ನಡೆಯನ್ನು ಮಾಜಿ ಪ್ರಧಾನಿಗಳು ಹಾಗೂ ಜಾತ್ಯತೀತ ಜನತಾದಳ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಾರೆ.
ಅಲ್ಲದೆ; ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯನ್ನು ಬೆಂಬಲಿಸಿ ಅದನ್ನು ಕಾರ್ಯಗತಗೊಳಿಸುವ ಅಚಲ ನಿರ್ಧಾರವನ್ನು ಇದೇ ಚುನಾವಣೆಯ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ದೃಢ ಹೆಜ್ಜೆಯನ್ನು ಇಡಲಿ ಎಂದು ಮಾಜಿ ಪ್ರಧಾನಿಗಳು ಆಗ್ರಹಪಡಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿಗಳು; ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ಅಂಶವನ್ನು ಸೇರಿಸುವುದನ್ನು ಜೆಡಿಎಸ್ ಖಂಡಿಸುತ್ತದೆ. ನಾವು ಕೂಡ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಬೆಂಬಲಿಸಿ ಆ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದು ಜನರಿಗೆ ತಿಳಿಸುತ್ತೇವೆ ಎಂದು ಗುಡುಗಿದರು.
ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ
ಇಂತಹ ಬೆದರಿಕೆಗಳಿಗೆ ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ಚುನಾವಣೆ ಮುಗಿದ ಮೇಲೆ ಮೇಕೆದಾಟು ಅಣೆಕಟ್ಟು ಕಟ್ಟಲು ನಾನೊಬ್ಬನೇ ಅಲ್ಲ, ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಬಿಜೆಪಿ ನಾಯಕರಾದ ಯಡಿಯೂರಪ್ಪ ಸಮೇತ ಹೋರಾಟ ಮಾಡೋಣ. ಅದಕ್ಕೂ ಮೊದಲು ಮೇಕೆದಾಟು ಕಟ್ಟಲು ಮ್ಯಾನಿಫೆಸ್ಟೋದಲ್ಲಿ ಹಾಕೋಣ ಹಾಗೂ ಆ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರಿಗೆ ಭರವಸೆ ನೀಡೋಣ. ಡಿಎಂಕೆ ಮಿತ್ರಪಕ್ಷವಾದ ಕಾಂಗ್ರೆಸ್ ಕೂಡ ಮೇಕೆದಾಟು ಯೋಜನೆ ಬೆಂಬಲಿಸಿ ಪ್ರಣಾಳಿಕೆಯಲ್ಲಿ ಜನತೆಗೆ ಭರವಸೆ ನೀಡಲಿ ಎಂದು ಮಾಜಿ ಪ್ರಧಾನಿಗಳು ಆಗ್ರಹಪಡಿಸಿದರು.
ತಮಿಳುನಾಡು ಪರ ವಕೀಲ ಶೇಖರ್ ನಫಾರ್ಡ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ಮೇಕೆದಾಟು ಅಣೆಕಟ್ಟು ಕಟ್ಟಲಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಅದರಿಂದ ನಾನು ರಾಜ್ಯ ಸರಕಾರಕ್ಕೆ ಮನವಿ ಮಾಡುತ್ತೇನೆ. ಡಿಎಂಕೆ ಅವರು ಪ್ರಣಾಳಿಕೆಯಲ್ಲಿ ಮೇಕೆದಾಟು ವಿರೋಧಿ ನಿಲುವು ಪ್ರಕಟಿಸದಂತೆ, ಇವರು ಕೂಡ ಪ್ರಣಾಳಿಕೆಯಲ್ಲಿ ಮೇಕೆದಾಟು ಪರವಾಗಿ ನಿಲುವು ಪ್ರಕಟಿಸಲಿ ಎಂದರು ಅವರು.
ನಾನು ದೆಹಲಿಗೆ ಯಾಕಾಗಿ ಹೋದೆ? ಮೇಕೆದಾಟು ಮಾಡಲು ಬಿಡೋದೇ ಇಲ್ಲ ಅಂತಾರೆ. ನಾವು ನಮ್ಮ ಮ್ಯಾನಿಫೆಸ್ಟೋದಲ್ಲಿ ಹಾಕ್ತೀವಿ. ಮೇಕೆದಾಟು ನಮ್ಮ ರಾಜ್ಯದಲ್ಲಿದೆ. ಇದರಲ್ಲಿ ಎರಡನೇ ಮಾತಿಲ್ಲ ಎಂದು ಅವರು ನೇರ ಮಾತುಗಳಲ್ಲಿ ಹೇಳಿದರು.
ಸಿದ್ದರಾಮಯ್ಯ ಬಜೆಟ್ ನಲ್ಲೇ ಮೇಕೆದಾಟು ಯೋಜನೆಗೆ ಅವಕಾಶ ಮಾಡಿದ್ದಾರೆ
ನಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಪ್ರವಾದ ಅಂಶ ಸೇರಿಸುತ್ತೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದ ಬಗ್ಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆ ಬರುವುದೇ ಇಲ್ಲ. ಆದರೆ, ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿಯೇ ಮೇಕೆದಾಟು ಯೋಜನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಬಿಜೆಪಿ ಕೂಡ ಪ್ರಣಾಳಿಕೆಯಲ್ಲಿ ಹಾಕಲಿ. ನಾವು ಮೂರು ಪಕ್ಷಗಳು ಒಟ್ಟುಗೂಡಿಯೇ ಹೋರಾಡಬೇಕು. ದೇವೇಗೌಡರು ಒಬ್ಬರು ಮಾತ್ರ ವೈಯಕ್ತಿಕವಾಗಿ ಹೆಸರು ತಗೋಬೇಕಿಲ್ಲ ಎಂದು ತಿಳಿಸಿದರು ದೇವೇಗೌಡರು.
ಪರಿಸರ ನಿಪುಣರಿಗೆ ಕಿವಿಮಾತು
ಇದು ಕಾಂಗ್ರೆಸ್, ಬಿಜೆಪಿ, ಡಿಎಂಕೆ ಅಥವಾ ಯಾವ ಪಕ್ಷದ ಯೋಜನೆ ಅಲ್ಲ. ಜನಪರವಾದ ಯೋಜನೆ. ಕುಡಿಯುವ ನೀರಿಗಾಗಿ ಜನ ಸಮಸ್ಯೆಗೆ ಒಳಗಾಗಿದ್ದಾರೆ. ಕಾವೇರಿ ಕೊಳ್ಳದ ಒಂಬತ್ತು ಜಿಲ್ಲೆಗಳಲ್ಲಿ ಜಲ ಸಂಕಷ್ಟ ಎದುರಾಗಿದೆ. ನಾನು ಕೈ ಮುಗಿದು ಎಲ್ಲರಿಗೂ ಮನವಿ ಮಾಡುತ್ತೇನೆ. ಮೇಕೆದಾಟು ಯೋಜನೆಯಿಂದ ಐದು ಸಾವಿರ ಎಕರೆ ಮುಳುಗಡೆ ಆಗಲ್ಲ. ಈ ಅಂಶವನ್ನು ಪರಿಸರ ನಿಪುಣರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿಗಳು ಕೋರಿದರು.
ಅಧಿಕಾರಿಗಳು, ನೀರಾವರಿ ತಜ್ಞರು ಮೇಕೆದಾಟು ಯೋಜನೆಯಿಂದ 30 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಈ ಯೋಜನೆಯ ಬಗ್ಗೆ 2018ರಲ್ಲಿಯೆ ಕೇಂದ್ರ ಸರ್ಕಾರ ಈ ಯೋಜನೆಯ ಕಾರ್ಯ ಸಾಧ್ಯತೆಯ ವರದಿಯನ್ನು ಕೇಂದ್ರೀಯ ಜಲ ಆಯೋಗಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಒಪ್ಪಿದ ನಂತರ ಸಮಗ್ರ ಯೋಜನಾ ವರದಿ (DPR) ಸಲ್ಲಿಸುವಂತೆ ರಾಜ್ಯಕ್ಕೆ ಸೂಚಿಸಿತ್ತು. ಅದರಂತೆ 2019ರಲ್ಲಿ ರಾಜ್ಯ ಸರ್ಕಾರ DPR ಸಲ್ಲಿಸಿದೆ. ಇದಕ್ಕೆ ಪ್ರಧಾನಮಂತ್ರಿಗಳು ಅನುಮತಿ ಕೊಡಿಸಬೇಕು ಹಾಗೂ ಈ ಮೇಕೆದಾಟು ಯೋಜನೆ ವಿಷಯದಲ್ಲಿ ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ಮಾಜಿ ಪ್ರಧಾನಿಗಳು ಮನವಿ ಮಾಡಿಕೊಂಡರು.
ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಶೇಖಾವತ್ ಅವರಿಗೆ ವಿವರವಾಗಿ ಮೇಕೆದಾಟು ಯೋಜನೆ ಬಗ್ಗೆ ಪತ್ರ ಬರೆದಿದ್ದೇನೆ. ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಗೆ ಅವಕಾಶ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ತಮಿಳುನಾಡಿಗೆ ನೀರು ಬಿಡುವುದನ್ನು ನಿಯಂತ್ರಿಸಬೇಕು ಎಂದು ಪತ್ರ ಬರೆದಿದ್ದೇನೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.
ರಾಜಕೀಯ ಬೇರೆಸಬೇಡಿ; ನೀರಿಲ್ಲದೆ ಜನರು ಮನೆ ಬಿಟ್ಟು ಹೋಗುತ್ತಿದ್ದಾರೆ
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜಕೀಯ ಆನಗತ್ಯ. ಯಾರೂ ಇದರಲ್ಲಿ ರಾಜಕೀಯ ಬೆರೆಸಬೇಡಿ. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು. ಮಾನವೀಯತೆಯಿಂದ ಮೇಕೆದಾಟು ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು. ಇಲ್ಲಿ ರಾಜ್ಯ ಸರಕರದ ವೈಫಲ್ಯ ಅಂತಲ್ಲ. ತಮಿಳುನಾಡು ರಾಜ್ಯದವರು ಪ್ರತೀ ದಿನ ಕೋರ್ಟಿಗೆ ಪಿಟಿಷನ್ ಹಾಕ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು ಮಾಜಿ ಪ್ರಧಾನಿಗಳು.
ಕಾವೇರಿ ಕೊಳ್ಳದ 9 ಜಿಲ್ಲೆಯ 22 ತಾಲೂಕು, ಬೆಂಗಳೂರು ನಗರವೂ ಸೇರಿ ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ತುಂಬಾ ಭೀಕರವಾಗಿದೆ. ಕಳೆದ ಐದು ದಿನಗಳಿಂದ ಕೆಲವರು ಮನೆಗಳಿಗೆ ಬೀಗ ಹಾಕಿ ವಲಸೆ ಹೋಗಿದ್ದಾರೆ. ಕುಡಿಯಲು ನೀರಿಲ್ಲ, ಈ ಭೀಕರ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯ ಸರಕಾರದಿಂದ ಸಾಧ್ಯವಾಗಿಲ್ಲ. ಹೀಗಾಗಿ ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ಬೇರೆ ಊರುಗಳಿಗೆ ಹೋಗ್ತಿದ್ದಾರೆ ಎಂದು ರಾಜ್ಯದ ಜಲ ಸಂಕಷ್ಟವನ್ನು ಎಳೆಎಳೆಯಾಗಿ ಬಿಡಿಸಿಟ್ಟರು ಮಾಜಿ ಪ್ರಧಾನಿಗಳು.
ತಮಿಳುನಾಡು ಸಿಎಂ ಬಹಳ ಕಠೋರವಾದ ನಿಲುವು ತೆಗೆದುಕೊಂಡಿದ್ದಾರೆ. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡಲ್ಲ ಅಂತಾ ಕಠಿಣವಾದ ಅಂಶ ಸೇರಿಸಿದ್ದಾರೆ. ನಾನೂ ಬೇರೆ ಶಬ್ದ ಬಳಕೆ ಮಾಡಬಹುದು. ಆದರೆ ‘ಕಠಿಣವಾದ’ ಎನ್ನುವ ಪದವನ್ನಷ್ಟೇ ತೆಗೆದುಕೊಂಡಿದ್ದೇನೆ ಎಂದು ಖಾರವಾಗಿ ತಿರುಗೇಟು ಕೊಟ್ಟ ಅವರು; 1964ರಲ್ಲಿ ವಿಧಾನಸಭೆಯಲ್ಲಿ ಒಂದು ಖಾಸಗಿ ನಿರ್ಣಯ ಮಂಡನೆ ಮಾಡಿದ್ದೆ ನಾನು. ನಮ್ಮ ರಾಜ್ಯದ ಸಂಪನ್ಮೂಲಗಳಿಂದ ಹೇಮಾವತಿ, ಹಾರಂಗಿ, ಕಬಿನಿ ಯೋಜನೆಗಳನ್ನು ಕಾರ್ಯಗತ ಮಾಡಬೇಕು ಎಂದು ನಾನು ವಾದ ಮಂಡನೆ ಮಾಡಿದ್ದೆ. ಅದು ಸಾಧ್ಯ ಆಯಿತು. ಇದನ್ನು ಅವರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಯಡಿಯೂರಪ್ಪ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ತಮಿಳುನಾಡಿನ ಜತೆ ಸಂಬಂಧ ವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ, ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆಗಳನ್ನು ಸ್ಥಾಪಿಸಿ ಒಳ್ಳೆಯ ಬಾಂಧವ್ಯಕ್ಕೆ ನಾಂದಿ ಹಾಡಿದ್ದರು. ಅವರೂ ಚೆನ್ನೈಗೆ ಹೋಗಿ ಸರ್ವಜ್ಞರ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಅವರು ಬೆಂಗಳೂರಿಗೆ ಬಂದು ತಿರುವಳ್ಳುವರ್ ಅವರ ಪುತ್ತಳಿಯನ್ನು ಲೋಕಾರ್ಪಣೆ ಮಾಡಿದ್ದರು. ಎರಡೂ ರಾಜ್ಯಗಳ ಸಂಬಂಧದ ವಿಚಾರದಲ್ಲಿ ಅದೊಂದು ಒಳ್ಳೆಯ ಸಂದರ್ಭ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಉಲ್ಲೇಖ ಮಾಡಿದರು.
ಸಮಸ್ಯೆ ಬಂತು ಎಂದಾಕ್ಷಣ ಸಂಘರ್ಷಕ್ಕೆ ಇಳಿಯಬೇಕಿಲ್ಲ. ಮಾತುಕತೆ ಮೂಲಕವೂ ಬಗೆಹರಿಸಿಕೊಳ್ಳಬಹುದು. ಇದನ್ನು ನೆರೆ ರಾಜ್ಯ ಅರ್ಥ ಮಾಡಿಕೊಳ್ಳಬೇಕು. ಜನರು ಯಾವ ಸಂಕ್ಷಟದಲ್ಲಿ ಇದ್ದಾರೆ ಎಂಬುದನ್ನು ಅವರು ನೋಡಬೇಕು ಎಂದು ಮಾಜಿ ಪ್ರಧಾನಿಗಳು ಪ್ರತಿಪಾದಿಸಿದರು.
ಮೈತ್ರಿಯಿಂದ ಸಮಸ್ಯೆ ಇಲ್ಲ
ಬಿಜೆಪಿ ಜತೆ ಮೈತ್ರಿಯಿಂದ ನಮಗೆ ಸಮಸ್ಯೆ ಇಲ್ಲ. ನಮಗೆ ಮೂರು ಸೀಟು ಕೊಟ್ಟಿದ್ದಾರೆ. ನನ್ನನ್ನು, ಕುಮಾರಸ್ವಾಮಿ ಹಾಗೂ ಜಿಟಿ ದೇವೇಗೌಡರನ್ನು ತಾರಾ ಪ್ರಚಾರಕರನ್ನಾಗಿ (ಸ್ಟಾರ್ ಕ್ಯಾಂಪೇನರ್) ಆಗಿ ಪಟ್ಟಿಗೆ ಸೇರಿಸಿದ್ದಾರೆ. ಇವತ್ತಷ್ಟೇ ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಸಿ ಎನ್
ಮಂಜುನಾಥ್ ಅವರ ಪರ ನಾವೆಲ್ಲಾ ಪ್ರಚಾರ ಮಾಡ್ತೀವಿ. ಮಂಡ್ಯದಲ್ಲಿ ಏನೂ ಸಮಸ್ಯೆ ಇಲ್ಲ ಎಂದರು ಮಾಜಿ ಪ್ರಧಾನಿಗಳು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡರು, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡರು, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ, ಪಕ್ಷದ ಕಾನೂನು ಘಟಕದ ಅಧ್ಯಕ್ಷ ಎ ಪಿ ರಂಗನಾಥ್, ಡಾ.ಸುಧಾಕರ್ ಶೆಟ್ಟಿ ಇತರರು ಉಪಸ್ಥಿತರಿದ್ದರು.