ಕರ್ನಾಟಕ ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಸೂಚನೆ: ಡ್ರಗ್ಸ್ ವಿರುದ್ಧ ಕಠಿಣ ಕ್ರಮ, ರೌಡಿಗಳ ಜೊತೆ ನಂಟು ಬೇಡ; ಕಾನೂನು ಮೀರಿ ನಡೆದರೆ ರಕ್ಷಣೆ ಇಲ್ಲ
ಬೆಂಗಳೂರು: ಕಾನೂನಿನ ಚೌಕಟ್ಟಿನೊಳಗೆ ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಬೆನ್ನಿಗೆ ಸರ್ಕಾರ ಹಾಗೂ ಗೃಹ ಸಚಿವರು ನಿಲ್ಲಲಿದ್ದಾರೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.
ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ‘ಗೃಹ ಸಚಿವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೇಬಲ್ಗಳು, ಹೆಡ್ ಕಾನ್ಸ್ಟೇಬಲ್ಗಳು, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ಗಳು ಹಾಗೂ ಸಬ್ ಇನ್ಸ್ಪೆಕ್ಟರ್ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೊಲೀಸ್ ಸಿಬ್ಬಂದಿಯ ಸೇವೆ ಮತ್ತು ಕರ್ತವ್ಯದ ವೇಳೆ ಎದುರಾಗುವ ಸಮಸ್ಯೆಗಳು, ಆರೋಗ್ಯ ಮತ್ತು ಮಾನಸಿಕ ಒತ್ತಡ, ವರ್ಗಾವಣೆ, ಬಡ್ತಿ, ಕುಟುಂಬ ಹಾಗೂ ಮಕ್ಕಳ ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ಖರ್ಗೆ ಸಿಬ್ಬಂದಿಯೊಂದಿಗೆ ನೇರವಾಗಿ ಸಂವಾದ ನಡೆಸಿದರು.

ಪೊಲೀಸ್ ಇಲಾಖೆಯ ಜವಾಬ್ದಾರಿ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸೀಮಿತವಲ್ಲ. ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹಾಗೂ ಕರ್ನಾಟಕ ಸುರಕ್ಷಿತ ಹೂಡಿಕೆ ತಾಣ ಎಂಬ ವಿಶ್ವಾಸ ಮೂಡಿಸುವಲ್ಲಿಯೂ ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಸಿಂಥೆಟಿಕ್ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ವಿರುದ್ಧದ ‘ಬೇಡ ಬ್ರೋ’ ಅಭಿಯಾನವನ್ನು ಪೊಲೀಸರು ಮಿಷನ್ ಮೋಡ್ನಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದ ಖರ್ಗೆ, ತಮ್ಮ ವ್ಯಾಪ್ತಿಯಲ್ಲಿ ಯಾರು ಮಾದಕ ವಸ್ತು ಸೇವಿಸುತ್ತಾರೆ, ಯಾರು ಮಾರಾಟ ಮಾಡುತ್ತಾರೆ ಮತ್ತು ಯಾವ ಮೆಡಿಕಲ್ ಶಾಪ್ ಅಥವಾ ಫಾರ್ಮಸಿಯಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಸಾಮಾನ್ಯವಾಗಿ ತಿಳಿದಿರುತ್ತದೆ ಎಂದರು.
ನಿರ್ದಿಷ್ಟ ಗುರಿ ನೀಡಿದಾಗ ಮಾತ್ರ ಇಂತಹ ಮಾಹಿತಿ ಹೊರಬರುವ ಪ್ರವೃತ್ತಿ ಸರಿಯಲ್ಲ. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು, ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಗುರಿ ನೀಡಿದಾಗ ಮಾತ್ರ ಮಾಡುವ ಕೆಲಸವಾಗಿ ನೋಡಬಾರದು ಎಂದು ಹೇಳಿದರು.
ಮಾದಕ ವಸ್ತುಗಳ ಸೇವನೆಯಿಂದ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಈ ಸಮಸ್ಯೆ ಬೆಂಗಳೂರು, ಮಂಗಳೂರು ಅಥವಾ ಬೆಳಗಾವಿಗೆ ಮಾತ್ರ ಸೀಮಿತವಾಗಿಲ್ಲ. ಚಿತ್ತಾಪುರ, ಚಿಂಚೋಳಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಗಾಂಜಾ ಬೆಳೆಯುತ್ತಿರುವುದು ಕಂಡುಬಂದಿದೆ. ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ನೆರೆ ರಾಜ್ಯಗಳ ಪೊಲೀಸರು ಬಂದು ದಾಳಿ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಖರ್ಗೆ ಹೇಳಿದರು.
ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪೊಲೀಸರು ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಸೂಚಿಸಿದ ಸಚಿವರು, ರೌಡಿಗಳೊಂದಿಗೆ ಯಾವುದೇ ರೀತಿಯ ನಂಟು ಬೆಳೆಸಬಾರದು ಎಂದು ಎಚ್ಚರಿಸಿದರು. ಠಾಣೆ ವ್ಯಾಪ್ತಿಯಲ್ಲಿ ಯಾರು ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರ ಬಳಿ ಇರುತ್ತದೆ. ಕೆಲವೊಮ್ಮೆ ಪೊಲೀಸರೇ ಇಂತಹ ವ್ಯಕ್ತಿಗಳನ್ನು ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೌಡಿಗಳೊಂದಿಗೆ ನೆಂಟಸ್ತಿಕೆ ಬೆಳೆಸುವುದು, ಅವರಿಗೆ ಮಾಹಿತಿ ನೀಡುವುದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಹೇಳಿದರು.
‘ರೌಡಿಗಳು ಪೊಲೀಸರಿಗೆ ಹೆದರಬೇಕೇ ಹೊರತು, ಸಾರ್ವಜನಿಕರು ಪೊಲೀಸರಿಗೆ ಹೆದರಬಾರದು. ತಪ್ಪು ಮಾಡುವವರಿಗಷ್ಟೇ ಪೊಲೀಸರ ಭಯ ಇರಬೇಕು’ ಎಂದು ಖರ್ಗೆ ಹೇಳಿದರು. ರೌಡಿಗಳಿಂದ ಮಕ್ಕಳು ಮತ್ತು ಯುವಕರು ಹಾಳಾಗುತ್ತಿದ್ದಾರೆ. ಪೊಲೀಸರ ಕೈ ಸ್ವಚ್ಛವಾಗಿದ್ದರೆ ರೌಡಿಗಳು ಪೊಲೀಸರಿಗೆ ಹೆದರುತ್ತಾರೆ ಎಂದರು.
ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಖರ್ಗೆ ಹೇಳಿದರು. ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಆರ್ಥಿಕ ಅಪರಾಧ, ಸೈಬರ್ ಬುಲ್ಲಿಯಿಂಗ್, ಈವ್ ಟೀಸಿಂಗ್ ಮತ್ತು ಸೆಕ್ಸ್ಟಾರ್ಷನ್ ಸೇರಿದಂತೆ ಹಲವು ಅಪರಾಧಗಳು ಆನ್ಲೈನ್ ಮೂಲಕ ನಡೆಯುತ್ತಿವೆ ಎಂದರು.
ಮಹಿಳೆಯರು ತಮ್ಮ ಖಾಸಗಿ ಚಿತ್ರಗಳು ಅಥವಾ ವಿಡಿಯೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ದೂರು ನೀಡಿದಾಗ ಪೊಲೀಸರು ಅತ್ಯಂತ ಸಂವೇದನಾಶೀಲವಾಗಿ ಸ್ಪಂದಿಸಬೇಕು. ಚಿತ್ರ ಅಥವಾ ವಿಡಿಯೋ ತೆಗೆದುಕೊಳ್ಳಲು ನೀಡಿದ ಸಮ್ಮತಿ ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ನೀಡಿದ ಸಮ್ಮತಿಯಲ್ಲ; ಕಾನೂನು ಈ ವಿಚಾರದಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.
ಯಾವುದೇ ಮಹಿಳೆ ಅಥವಾ ಆಕೆಯ ಪೋಷಕರು ದೂರು ಅಥವಾ ಮನವಿಯೊಂದಿಗೆ ಬಂದಾಗ ತಕ್ಷಣ ಕ್ರಮ ಕೈಗೊಳ್ಳಬೇಕು. ‘ಮಹಿಳೆಯ ಗೌರವಕ್ಕಿಂತ ದೊಡ್ಡದು ಯಾವುದೂ ಇಲ್ಲ’ ಎಂದು ಸಚಿವರು ಸೂಚಿಸಿದರು.
ಪೊಲೀಸ್ ಸಿಬ್ಬಂದಿಯ ಕರ್ತವ್ಯ ಅತ್ಯಂತ ಒತ್ತಡದಿಂದ ಕೂಡಿದೆ ಎಂದು ಹೇಳಿದ ಖರ್ಗೆ, ಹಬ್ಬ-ಹರಿದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸುವುದು, ಸಂಚಾರದ ಒತ್ತಡ ಎದುರಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ದೂರುಗಳಿಗೆ ಸ್ಪಂದಿಸುವುದು ಸೇರಿದಂತೆ ನಿರಂತರ ಒತ್ತಡದ ವಾತಾವರಣದಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದರು.
ಹೀಗಾಗಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವ ಪ್ರತ್ಯೇಕ ಯೋಜನೆ ರೂಪಿಸಲಾಗುವುದು. ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಯ ಕುಟುಂಬ, ವರ್ಗಾವಣೆ, ಬಡ್ತಿ ಮತ್ತು ಸೇವಾ ಮೌಲ್ಯಮಾಪನ ಸೇರಿದಂತೆ ವಿವಿಧ ವಿಚಾರಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಉತ್ತಮ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಖರ್ಗೆ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಕೇವಲ ಸೇವಾವಧಿಯ ಆಧಾರದ ಮೇಲೆ ಬಡ್ತಿ ಪರಿಗಣಿಸುವುದರ ಜೊತೆಗೆ ಕಾರ್ಯಕ್ಷಮತೆ ಮತ್ತು ಸರ್ಕಾರದ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯಕ್ಕೂ ಮಹತ್ವ ನೀಡಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೂ ಸರ್ಕಾರ ವಿಶೇಷ ಆದ್ಯತೆ ನೀಡಲಿದೆ. ಕೇವಲ ಪ್ರಮಾಣಪತ್ರ ಪಡೆಯುವ ಶಿಕ್ಷಣಕ್ಕಿಂತ ಕೈಗಾರಿಕೆಗೆ ಅಗತ್ಯವಾದ ಕೌಶಲ್ಯ, ಭಾಷಾ ಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸುವುದು ಮುಖ್ಯ ಎಂದು ಹೇಳಿದರು.
ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯ ಗುರುತಿಸಿ ಅವರಿಗೆ ಅಗತ್ಯ ಕೌಶಲ್ಯ ತರಬೇತಿ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಉದ್ಯೋಗದ ಖಾತರಿ ನೀಡಲು ಸಾಧ್ಯವಾಗದಿದ್ದರೂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ನೀಡುವ ಖಾತರಿಯನ್ನು ಸರ್ಕಾರ ನೀಡಲಿದೆ ಎಂದು ಖರ್ಗೆ ಹೇಳಿದರು.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ‘ನಿಪುಣ ಕರ್ನಾಟಕ’ ಕಾರ್ಯಕ್ರಮದ ಮೂಲಕ ಕೌಶಲ್ಯಾಭಿವೃದ್ಧಿ, ಉತ್ತಮ ಸಂವಹನ ಕೌಶಲ್ಯ ಹಾಗೂ ಭಾಷಾ ಪ್ರಯೋಗಾಲಯಗಳಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಸ್ನೇಹಪರ ಪೊಲೀಸ್ ಠಾಣೆ ಎಂದರೆ ಕೇವಲ ಹೊಸ ಕಟ್ಟಡ ನಿರ್ಮಿಸುವುದಲ್ಲ. ಠಾಣೆಯೊಳಗಿನ ಸಿಬ್ಬಂದಿಯ ನಡವಳಿಕೆ ಮತ್ತು ಸಾರ್ವಜನಿಕರೊಂದಿಗೆ ಇರುವ ಸಂಬಂಧವೇ ಸ್ನೇಹಪರ ಪೊಲೀಸ್ ವ್ಯವಸ್ಥೆಯ ನಿಜವಾದ ಅರ್ಥ ಎಂದು ಖರ್ಗೆ ಹೇಳಿದರು.
ಪೊಲೀಸ್ ಠಾಣೆಗೆ ಬರುವ ವ್ಯಕ್ತಿಗೆ ಅದು ಮೊದಲ ಬಾರಿಗೆ ಎದುರಾಗಿರುವ ಸಮಸ್ಯೆಯಾಗಿರಬಹುದು. ಆದರೆ ಪೊಲೀಸರಿಗೆ ಅದು ದಿನನಿತ್ಯದ ಕೆಲಸವಾಗಿರಬಹುದು. ಈ ವ್ಯತ್ಯಾಸವನ್ನು ಅರ್ಥಮಾಡಿಕೊಂಡು ಸಾರ್ವಜನಿಕರೊಂದಿಗೆ ಮಾನವೀಯವಾಗಿ ಮತ್ತು ಗೌರವಯುತವಾಗಿ ವರ್ತಿಸಬೇಕು ಎಂದರು.
ಜನರು ಪೊಲೀಸರನ್ನು ಸಂಪರ್ಕಿಸಲು ಯಾವುದೇ ಹಿಂಜರಿಕೆ ಹೊಂದಬಾರದು. ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹಿತರಂತೆ ವರ್ತಿಸಬೇಕೆಂದಿಲ್ಲ; ಆದರೆ ಮಾನವೀಯತೆ ಮತ್ತು ಗೌರವದಿಂದ ವರ್ತಿಸಬೇಕು ಎಂದು ಹೇಳಿದರು.
‘ನೀವು ಕೇವಲ ಕರ್ನಾಟಕ ಪೊಲೀಸ್ ಅಲ್ಲ; ನೀವು ಕರ್ನಾಟಕ ರಾಜ್ಯದ ಮುಖ’ ಎಂದು ಪೊಲೀಸ್ ಸಿಬ್ಬಂದಿಗೆ ಖರ್ಗೆ ಹೇಳಿದರು.
ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಗೃಹ ಇಲಾಖೆಯ ಪಾತ್ರ ಬಹಳ ಮಹತ್ವದ್ದಾಗಿದೆ. ದೇಶ-ವಿದೇಶಗಳ ಹೂಡಿಕೆದಾರರನ್ನು ಕರ್ನಾಟಕಕ್ಕೆ ಆಹ್ವಾನಿಸುವಾಗ ರಾಜ್ಯದ ಉತ್ತಮ ಮಾನವ ಸಂಪನ್ಮೂಲ, ಶಿಕ್ಷಣ ಸಂಸ್ಥೆಗಳು ಮತ್ತು ತಂತ್ರಜ್ಞಾನ ಸಾಮರ್ಥ್ಯದ ಜೊತೆಗೆ ಕರ್ನಾಟಕ ಸುರಕ್ಷಿತ ರಾಜ್ಯ ಎಂಬ ವಿಶ್ವಾಸವನ್ನೂ ಮೂಡಿಸಬೇಕಾಗುತ್ತದೆ ಎಂದರು.
ಹೂಡಿಕೆದಾರರು ಕೇವಲ ತಮ್ಮ ಬಂಡವಾಳಕ್ಕೆ ಸುರಕ್ಷಿತ ತಾಣವನ್ನು ಹುಡುಕುವುದಿಲ್ಲ; ತಮ್ಮ ಕುಟುಂಬ ಮತ್ತು ಸಿಬ್ಬಂದಿಯೂ ಸುರಕ್ಷಿತವಾಗಿ ವಾಸಿಸಬಹುದಾದ ಸ್ಥಳವನ್ನು ಆಯ್ಕೆ ಮಾಡುತ್ತಾರೆ. ಈ ನಂಬಿಕೆಯನ್ನು ಮೂಡಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ನಿರ್ಣಾಯಕವಾಗಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ಸಂವಾದದಲ್ಲಿ ಪಾಲ್ಗೊಂಡಿದ್ದು, ಸುಮಾರು 200 ಮಂದಿ ಆರೋಗ್ಯ, ಬಡ್ತಿ, ವರ್ಗಾವಣೆ, ಹ್ಯಾಂಡ್ಕಫ್ಸ್ ಮತ್ತು ಪೊಲೀಸ್ ಪದಕ ಸೇರಿದಂತೆ ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದರು.
ಸಿಬ್ಬಂದಿ ಪ್ರಸ್ತಾಪಿಸಿದ ಪ್ರತಿಯೊಂದು ವಿಚಾರವನ್ನೂ ದಾಖಲಿಸಲಾಗಿದೆ. ಯಾವ ವಿಷಯಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸ್ ಸಿಬ್ಬಂದಿ ಪ್ರಾಮಾಣಿಕವಾಗಿ, ಕಾನೂನುಬದ್ಧವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಪುನರುಚ್ಚರಿಸಿದ ಖರ್ಗೆ, ಕಾನೂನಿನ ಪ್ರಕಾರ ಕೆಲಸ ಮಾಡುವವರೆಗೆ ಗೃಹ ಸಚಿವರು ಮತ್ತು ಸರ್ಕಾರ ಸಿಬ್ಬಂದಿಯೊಂದಿಗೆ ನಿಲ್ಲಲಿದೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ರೀತಿಯ ರಕ್ಷಣೆ ಇರುವುದಿಲ್ಲ ಎಂದು ಎಚ್ಚರಿಸಿದರು.
ಸರ್ಕಾರದಿಂದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ನಿರೀಕ್ಷಿಸುವಂತೆಯೇ ಪೊಲೀಸ್ ಸಿಬ್ಬಂದಿಯಿಂದಲೂ ಅದೇ ಮಟ್ಟದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸರ್ಕಾರ ನಿರೀಕ್ಷಿಸುತ್ತದೆ ಎಂದರು.
ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಇಲಾಖೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಸಾಧ್ಯ. ಸಚಿವರು ಮತ್ತು ಅಧಿಕಾರಿಗಳು ಬಂದು ಹೋಗುತ್ತಾರೆ; ಪೊಲೀಸ್ ಸಿಬ್ಬಂದಿಯೂ ಒಂದು ದಿನ ನಿವೃತ್ತರಾಗುತ್ತಾರೆ. ಆದರೆ ಸೇವೆಯಲ್ಲಿರುವ ಅವಧಿಯಲ್ಲಿ ಅಭಿವೃದ್ಧಿ, ಉತ್ತಮ ಸಂಬಂಧ ಮತ್ತು ಸಾರ್ವಜನಿಕ ಸೇವೆಯ ಉದ್ದೇಶದೊಂದಿಗೆ ಕೆಲಸ ಮಾಡಬೇಕು ಎಂದು ಖರ್ಗೆ ಕರೆ ನೀಡಿದರು.
