ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿ ಹಲವರ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರ ಮುಂದೆ ಇರುವ ಎಲ್ಲ ಪ್ರಕರಣಗಳ ಅಭಿಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಇಂದು ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆ 10.30ಕ್ಕೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯಿಂದ ಆರಂಭಗೊಂಡು ರಾಜಭವನದ ವರೆಗೂ ಬೃಹತ್ ಕಾಲ್ನಾಡಿಗೆ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೇತೃತ್ವದಲ್ಲಿ ಹೋರಾಟ ನಡೆಯಲಿದೆ ಎಂದು ತಿಳಿಸಲಾಗಿದೆ.
ವಿಶೇಷವಾಗಿ ಕೆಲವು ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ನೀಡಿಲ್ಲ. ಆದರೆ ಪ್ರಾಥಮಿಕ ತನಿಖೆ ನಡೆಯದಿದ್ದರೂ ಮುಖ್ಯಮಂತ್ರಿ ವಿರುದ್ಧ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ. ಈ ಧೋರಣೆ ಖಂಡನೀಯ. ಈ ತಾರತಮ್ಯ ಯಾಕೆ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಲಿದ್ದಾರೆ. ಈ ಚಲೋ ಹೋರಾಟದಲ್ಲಿ ಎಲ್ಲ ಸಚಿವರು, ಕಾಂಗ್ರೆಸ್ ಶಾಸಕರು, ಪರಿಷತ್ತಿನ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು, ಪಕ್ಷದ ನಾಯಕರು ಭಾಗವಹಿಸಲು ಕೆಪಿಸಿಸಿ ಕರೆ ನೀಡಿದೆ.