ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಕುಟಂಬ ಸದಸ್ಯರು ಹಾಗೂ ಇನ್ನಿತರರ ವಿರುದ್ಧ 2020ರ ನವೆಂಬರ್ 19ರಂದು ಟಿ.ಜೆ.ಅಬ್ರಹಾಂ, ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎದುರು ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ರಾಜ್ಯಪಾಲರು ತನಿಖೆಗೆ ಅನುಮತಿ ನಿರಾಕರಿಸಿದ್ದನ್ನು ಪುನರ್ ಪರಿಶೀಲನೆ ಮಾಡಿ, ತನಿಖೆಗೆ ಪೂರ್ವಾನುಮತಿ ನೀಡುವಂತೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ತಿಳಿಸಿದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆ, ಮನಿ ಲಾಂಡ್ರಿಂಗ್ ಕಾಯ್ದೆಯಡಿ ಯಡಿಯೂರಪ್ಪ, ಅವರ ಕುಟುಂಬ ಸದಸ್ಯರು ಹಾಗೂ ಇತರರ ವಿರುದ್ಧ ಅಬ್ರಹಾಂ ದೂರು ದಾಖಲಿಸಿದ್ದರು. ಅಲ್ಲದೇ, ಈ ಸಂಬಂಧ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದರು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಆದರೆ, ರಾಜ್ಯಪಾಲರು ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಲು ನಿರಾಕರಿಸಿದರು. ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ, ರಾಜ್ಯಪಾಲರು ಅಂದು ತೆಗೆದುಕೊಂಡಿದ್ದ ನಿರ್ಣಯವನ್ನು ಹಿಂಪಡೆದು, ಈ ಕುರಿತು ಪುನರ್ ಪರಿಶೀಲಿಸಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಗೆ ಪೂರ್ವಾನುಮತಿ ನೀಡುವಂತೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ಏನಿದು ಪ್ರಕರಣ?:
ಬೆಂಗಳೂರು ಪೂರ್ವ ತಾಲೂಕಿನ ಕೋನದಾಸಪುರದಲ್ಲಿ 2017ರಲ್ಲಿ ಬಿಡಿಎ 567 ಕೋಟಿ ರೂ.ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಟೆಂಡರ್ ಕರೆದಿತ್ತು. ಅದರಲ್ಲಿ ರಾಮಲಿಂಗಮ್ ಕನ್ಸ್‍ಟ್ರಕ್ಷನ್ ಕಂಪೆನಿ ಹಾಗೂ ನಾಗಾರ್ಜುನ ಕನ್ಸ್‍ಟ್ರಕ್ಷನ್ ಕಂಪೆನಿಯನ್ನು ಪರಿಗಣಿಸಲಾಗಿತ್ತು. ಇದರಲ್ಲಿ ರಾಮಲಿಂಗಮ್ ಕನ್ಸ್‍ಟ್ರಕ್ಷನ್ ಕಂಪೆನಿಯು 666.62 ಕೋಟಿ ರೂ.ಗಳ ಬಿಡ್ ಮಾಡಿತ್ತು. ನಾಗಾರ್ಜುನ ಕನ್ಸ್‍ಟ್ರಕ್ಷನ್ ಕಂಪೆನಿಯು 691.74 ಕೋಟಿ ರೂ.ಗಳ ಬಿಡ್ ಮಾಡಿತ್ತು.
2019ರ ಜು.6ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆನಂತರ, ಡಾ.ಜಿ.ಸಿ. ಪ್ರಕಾಶ್ ಬಿಡಿಎ ಆಯುಕ್ತರಾಗಿ ನೇಮಕವಾದರು. ರಾಮಲಿಂಗಮ್ ಕನ್ಸ್ ಟ್ರಕ್ಷನ್ ಕಂಪೆನಿಯವರು ಮನೆಗಳ ನಿರ್ಮಾಣ ಯೋಜನೆಯನ್ನು ಪ್ರಾರಂಭಿಸಲು ಯಡಿಯೂರಪ್ಪ ಪರವಾಗಿ ಜಿ.ಸಿ.ಪ್ರಕಾಶ್ 12 ಕೊಟಿ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು.
ಈ 12 ಕೋಟಿ ರೂ.ಗಳನ್ನು ರಾಮಲಿಂಗಮ್ ಸಂಸ್ಥೆಯುವರು ಕೆ.ರವಿ ಎಂಬವರಿಗೆ ನೀಡಿದ್ದರು. ಆ ಹಣವನ್ನು ಪ್ರಕಾಶ್ ಅವರು ರವಿಯವರಿಂದ ಪಡೆದು ಬಿ.ವೈ.ವಿಜಯೇಂದ್ರ ಅವರಿಗೆ ತಲುಪಿಸಲಾಗಿತ್ತು. ಈ ಬಗ್ಗೆ ತನಿಖೆಗೆ ಅನುಮತಿ ಕೋರಿ ಅಬ್ರಹಾಂ ದೂರು ಸಲ್ಲಿಸಿದ್ದರು. ಆದರೆ, ರಾಜ್ಯಪಾಲರು ತನಿಖೆಗೆ ಅನುಮತಿ ನಿರಾಕರಿಸಿದ್ದರು. ಅಲ್ಲದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿಯೂ ದೂರನ್ನು ತಿರಸ್ಕರಿಸಲಾಗಿತ್ತು.
2021ರಲ್ಲಿ ಅಬ್ರಹಾಂ ಈ ಸಂಬಂಧ ಹೈಕೋರ್ಟ್ ಮೊರೆ ಹೋದರು. 2022ರಲ್ಲಿ ಹೈಕೋರ್ಟ್ ಅರ್ಜಿಯನ್ನು ಪುರಸ್ಕರಿಸಿ, ಈ ಸಂಬಂಧ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತು. 2022ರ ಸೆ.14ರಂದು ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಈ ಸಂಬಂಧ ತನಿಖೆಗೆ ಆದೇಶ ನೀಡಿತು. ಅದರಂತೆ,ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದರು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್‍ನಲ್ಲಿ ಎಸ್‍ಎಲ್‍ಪಿ ದಾಖಲಿಸಿದ್ದು, ನ.29ರಂದು ವಿಚಾರಣೆಗೆ ಬರುವ ಸಾಧ್ಯತೆಯಿದೆ.