ಬೆಂಗಳೂರು:
ಕೊರೋನಾ ಸೋಂಕಿನ ಹೊಸ ವೈರಸ್ ಭೀತಿ ನಡುವೆಯೂ ಪೂರ್ವ ನಿಗದಿಯಂತೆ ರಾಜ್ಯಾದ್ಯಂತ ಜನವರಿ 1 ರಿಂದ ಶಾಲೆಗಳು ಆರಂಭವಾಗಲಿದೆ.
ಜನವರಿಯಿಂದ 10 ಮತ್ತು 12ನೇ ತರಗತಿಗಳು ಪ್ರಾರಂಭವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತಾಂತ್ರಿಕ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭಿಸಲು ಯಾವುದೇ ತೊಡಕಿಲ್ಲ. ಏನಾದರೂ ಹೊಸ ಬೆಳವಣಿಗೆಗಳಿದ್ದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ತರಗತಿ ಆರಂಭದ ವೇಳೆ ಪ್ರಮಾಣಿಕ ಕಾರ್ಯಾಚರಣೆ ವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ. ಕೊರೊನಾ ಎರಡನೇ ಅಲೆಯ ಬಗ್ಗೆ ಪರಾಮರ್ಶಿಸಿ, ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಸಹ ಹೊಸ ವೈರಸ್ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಎಲ್ಲ ರಾಜ್ಯಗಳಿಗೆ ಹೇಳಿದೆ. ಆದಾಗ್ಯೂ ಎಲ್ಲ ರೀತಿಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಸಚಿವ ಸುರೇಶ್ ಕುಮಾರ್ ಬೆಂಗಳೂರಿನಲ್ಲಿರುವ ಸರ್ಕಾರಿ ಅಲ್ಪಸಂಖ್ಯಾತರ ವಿಕೆಒ ಪಿಯು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲೆಗಳು ಸ್ಥಗಿತಗೊಂಡ ಪರಿಣಾಮ ಗ್ರಾಮಾಂತರ ಪ್ರದೇಶದಲ್ಲಿ ವಿದ್ಯಾರ್ಥಿಗಳು ಬಾಲಕಾರ್ಮಿಕರಾಗುತ್ತಿದ್ದು, ಹಾಗೆಯೇ ಬಾಲ್ಯವಿವಾಹ ಹೆಚ್ಚಳವಾಗುತ್ತಿದೆ. ಇದನ್ನು ಮನಗಂಡು ಶಾಲೆಗಳನ್ನು ಪುನರಾರಂಭಿಸುತ್ತಿದ್ದೇವೆ. 6, 7, 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮವನ್ನು ಜನವರಿಯಿಂದಲೇ ಆರಂಭಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಬ್ರಿಟನ್ ನಲ್ಲಿ ಕೋವಿಡ್ -19 ಹೊಸ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಬಗ್ಗೆ ಆತಂಕ ಮೂಡಿರುವ ಕಾರಣ ಬೆಂಗಳೂರಿನಲ್ಲಿಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಮುಖ್ಯಮಂತ್ರಿ, ಶಿಕ್ಷಣ, ಆರೋಗ್ಯ ಸಚಿವರು ತುರ್ತು ಸಭೆ ನಡೆಸಿದರು. ಶಾಲೆಗಳನ್ನು ಸದ್ಯಕ್ಕೆ ಆರಂಭಿಸಬಹುದು ಎನ್ನುವ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ ಎನ್ನಲಾಗಿದೆ. UNI