ಸಿದ್ದಿ ಮಕ್ಕಳ ಕ್ರೀಡಾ ತರಬೇತಿಗೂ ಚಾಲನೆ- 75 ನೇತಾಜಿ ಅಮೃತ ಎನ್‌ಸಿಸಿ ಶಾಲೆ,ಕಾಲೇಜುಗಳ ಘೋಷಣೆ
ಬೆಂಗಳೂರು:
ನವೀಕೃತ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಲೋಕಾರ್ಪಣೆಗೊಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಉದ್ಘಾಟನೆಗೊಳಿಸಿದರು. ಸಚಿವ ಡಾ.ನಾರಾಯಣಗೌಡ ಅವರು ಜಿಎಫ್‌ಟಿಎಸ್ ಲೋಗೋ ಅನಾವರಣಗೊಳಿಸಿದರು. ಇದೆ ವೇಳೇ 75 ನೇತಾಜಿ ಅಮೃತ ಎನ್‌ಸಿಸಿ ಶಾಲೆ ಕಾಲೇಜುಗಳ ಘೋಷಣೆ, ಟ್ವಿನ್ ಎಂಜಿನ್ ವಿಮಾನ ಲೋಕಾರ್ಪಣೆ, ಸಿದ್ದಿ ಜನಾಂಗದ ಕ್ರೀಡಾಪಟುಗಳ ತರಬೇತಿಗೆ ಚಾಲನೆ ನೀಡಲಾಯಿತು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಸಚಿವರಾದ ಡಾ. ಸಿಎನ್ ಅಶ್ವಥ್ ನಾರಾಯಣ್, ಬಿ.ಸಿ ನಾಗೇಶ್, ಶಾಸಕ ಕೃಷ್ಣ ಬೈರೇಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಕ್ರೀಡಾ ಇಲಾಖೆ ಕಾರ್ಯ ವೈಖರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ
ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ.ನಾರಾಯಣಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸುಭಾಷ್ ಚಂದ್ರ ಬೋಸ್ ಸ್ವತಂತ್ರ ಪೂರ್ವದ ಧೀರ ಶೂರ ನಕ್ಷತ್ರ, ಒಬ್ಬ ಯುಗಪುರುಷ. ಸಾಮಾನ್ಯವಾಗಿ ಯುಗದಲ್ಲಿ ಒಬ್ಬರು ಇಂಥವರು ಹುಟ್ಟುತ್ತಾರೆ. ಸುಭಾಷ್ ಚಂದ್ರ ಬೋಸ್ ಅವರು ಸಣ್ಣ ವಯಸ್ಸಿನಲ್ಲೇ ನಾಡು, ಸ್ವಾಭಿಮಾನ, ದೇಶಾಭಿಮಾನದಿಂದ ಬೆಳೆದವರು. ಅವರಲ್ಲಿ ದೇಶಭಕ್ತಿಯ ರಕ್ತ ಚಿಮ್ಮುತ್ತಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ, ಕೊಡುಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಮರಿಸಿದರು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಎನ್‌ಸಿಸಿ ಬಗ್ಗೆ ಆಸಕ್ತಿ ಕಡಿಮೆ ಆಗ್ತಿದೆ. ಹಾಗಾಗಿ, ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ 75 ಶಾಲೆ ಕಾಲೇಜುಗಳಲ್ಲಿ ಆರಂಭ ಮಾಡುವ ಮೂಲಕ 7500 ವಿದ್ಯಾರ್ಥಿಗಳ ವೆಚ್ಚವನ್ನು ಸರ್ಕಾರ ಭರಿಸಲು ನಿರ್ಧಾರ ಮಾಡಲಾಗಿದೆ. ರಕ್ಷಣಾ ಇಲಾಖೆಯ ಅನುಮತಿ ಪಡೆದು ಎನ್‌ಸಿಸಿ ಕೆಡೆಟ್‌ಗಳನ್ನು ಹೆಚ್ಚಿಸುವ ಕಾರ್ಯ ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು. ಇದರ ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯವೈಖರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿಂದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದ್ಯೋ ಇಲ್ವೋ ಅನ್ನೋ ರೀತಿಯಲ್ಲಿತ್ತು. ಆದರೇ, ಇತ್ತೀಚಿನ ದಿನಗಳಲ್ಲಿ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಅಮೃತ ಕ್ರೀಡಾ ದತ್ತು ಯೋಜನೆ, ಯುವ ಜನೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸ್ವಂತ ಶಕ್ತಿಯಿಂದ ಮಾಡಿದೆ. ಅದೆಲ್ಲದಕ್ಕೂ ಕಿರೀಟಪ್ರಾಯದ ರೀತಿಯಲ್ಲಿ ವೈಮಾನಿಕ ತರಬೇತಿ ಶಾಲೆಯನ್ನು ಆರಂಭ ಮಾಡಲಾಗಿದೆ. ರನ್ ವೇ ವಿಸ್ತರಿಸುವುದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.
ಕನಸು ನನಸಾದ ಸಂತಸ: ಸಚಿವ ನಾರಾಯಣಗೌಡ
ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯಾಪ್ತಿಗೆ ಬರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ನಾನಾ ಕಾರಣಗಳಿಂದ ಸ್ಥಗಿತಗೊಂಡಿತ್ತು. ನಾನು ಸಚಿವನಾದ ಕೂಡಲೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ಆದಷ್ಟು ಬೇಗ ಪುನಾರಂಭಿಸಬೇಕು ಎಂದು ಸೂಚನೆ ನೀಡಿದ್ದೆ. ಈ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆರಂಭಿಸುವದರಿಂದ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂಬ ಕಾರಣಕ್ಕೆ ಇದನ್ನು ಶೀಘ್ರವೇ ಪುನಾರಂಭ ಮಾಡಬೇಕು ಎಂದು ಕನಸು ಹೊತ್ತಿದ್ದೆ. ಹಾಗಾಗಿ, ಹಗಲು ರಾತ್ರಿ ಶ್ರಮವಹಿಸಿ, ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕೇವಲ 6 ತಿಂಗಳಲ್ಲೇ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ. ಪ್ರತಿವರ್ಷ ನೂರು ಪೈಲಟ್‌ಗಳ ತರಬೇತಿ ನೀಡುವ ಗುರಿ ಹೊಂದಿದ್ದು, ಮುಂದಿನ ವಾರದಿಂದಲೇ ತರಗತಿಗಳು ಆರಂಭವಾಗಲಿವೆ. ಈ ಮೂಲಕ ಐತಿಹಾಸಿಕವಾದ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಗತ ವೈಭವ ಮರಳಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ನೇತಾಜಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶಭಕ್ತಿ, ಸಂಸ್ಕಾರ ಆಚಾರ ವಿಚಾರಗಳಿಗೆ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಎನ್‌ಸಿಸಿ ಶಾಲೆಗಳನ್ನು ಘೋಷಿಸಿದ್ದಾರೆ. ನೇತಾಜಿಯವರು ಶಿಸ್ತಿಗೆ ಹೆಸರಾಗಿದ್ದವರು. ಅದೇ ಶಿಸ್ತು ನಮ್ಮ ಯುವಕರಲ್ಲಿ ಮೂಡಿಸಲು ಎನ್‌ಸಿಸಿ ಸಹಾಯಕವಾಗಲಿದೆ. ಎನ್‌ಸಿಸಿ ಕೆಡೆಟ್‌ಗಳಿಗೆ ಫ್ಲೆಯಿಂಗ್ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ದೇಶಕ್ಕೆ ಉಜ್ವಲ ಭವಿಷ್ಯ ನೀಡುವುದಕ್ಕೆ ಅವಕಾಶ ಇರುವುದು ಯುವಕರಿಗೆ ಮಾತ್ರ ಎಂದು ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಅವರು ಹೇಳಿದರು.
ಜಕ್ಕೂರು ವೈಮಾನಿಕ ತರಬೇತಿ ಶಾಲೆ ಮೈಸೂರು ಮಹಾರಾಜರು ನೀಡಿದ ಕೊಡುಗೆ
ನಾನಾ ಕಾರಣಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಸಚಿವರಾದ ಡಾ.ನಾರಾಯಣಗೌಡ ಅವರು ಆಸಕ್ತಿಯಿಂದ ಪುನಾರಂಭ ಮಾಡಿದ್ದಾರೆ. ಸಚಿವರು, ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಮುಂದಿನ ಪೀಳಿಗೆಗೂ ಇದು ತಲುಪಬೇಕು. ರನ್ ವೇ ಉದ್ದವನ್ನು ವಿಸ್ತರಿಸಿದ್ರೇ ಎಲ್ಲಾ ರೀತಿಯ ವಿಮಾನಗಳ ಪೈಲಟ್‌ಗಳಿಗೆ ತರಬೇತಿ ನೀಡಲು ಅನುಕೂಲ ಆಗಲಿದೆ ಎಂದು ಶಾಸಕ ಕೃಷ್ಣ ಬೈರೇಗೌಡ ಅವರು ಹೇಳಿದರು.
ಎರಡು ಕೋಟಿ ವೆಚ್ಚದಲ್ಲಿ ರನ್ ವೇ ನಿರ್ಮಾಣ, ಹೊಸದಾಗಿ ಟ್ವಿನ್ ಎಂಜಿನ್ ಸೇರ್ಪಡೆ
ಎರಡು ಕೋಟಿ ವೆಚ್ಚದಲ್ಲಿ 874 ಮೀಟರ್ ರನ್ ವೇ ಉನ್ನತಿಕರಿಸಲಾಗಿದೆ. ಶಾಲೆಯಲ್ಲಿದ್ದ ಐದು ಸಿಂಗಲ್ ಎಂಜಿನ್ ವಿಮಾನಗಳನ್ನು ದುರಸ್ಥಿಗೊಳಿಸಿ, ತರಬೇತಿಗೆ ಸಿದ್ದಪಡಿಸಲಾಗಿದೆ. ಅಲ್ಲದೇ, 5 ಕೋಟಿ ವೆಚ್ಚದಲ್ಲಿ ಟ್ವಿನ್ ಎಂಜಿನ್ ಖರೀದಿಸಲಾಗಿದೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಮುಂದಿನ ವಾರದಿಂದ ತರಬೇತಿ ಆರಂಭ
ಜಕ್ಕೂರು ವೈಮಾನಿಕ ಶಾಲೆಯಲ್ಲಿ ತರಬೇತಿ ಪಡೆಯಲು ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಕ್ಕೂರು ವೈಮಾನಿಕ ತರಬೇತಿ ಶಾಲೆಯಲ್ಲಿ ಈಗಾಗಲೇ 40 ವಿದ್ಯಾರ್ಥಿಗಳಿದ್ದು, ಹೊಸ ಬ್ಯಾಚ್‌ಗೆ 35 ಅರ್ಜಿಗಳು ಬಂದಿವೆ. ಮುಂದಿನ ವಾರದಿಂದ ತರಬೇತಿ ತರಗತಿಗಳು ಆರಂಭವಾಗಲಿವೆ.