Home ಬೆಂಗಳೂರು ನಗರ ಎನ್.ಸಿ.ಸಿ ಯಲ್ಲಿ 7500 ಹೊಸ ಕೆಡೆಟ್‍ಗಳಿಗೆ ಅವಕಾಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎನ್.ಸಿ.ಸಿ ಯಲ್ಲಿ 7500 ಹೊಸ ಕೆಡೆಟ್‍ಗಳಿಗೆ ಅವಕಾಶ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

22
0
7500 new cadets to get opportunity in NCC Karnataka Chief Minister
bengaluru

ಬೆಂಗಳೂರು:

ಸ್ವಾತಂತ್ರೋತ್ಸವದ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ 75 ಯುನಿಟ್‍ಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿ, 7500 ಹೊಸ ಕೆಡೆಟ್‍ಗಳಿಗೆ ಈ ಬಾರಿ ಎನ್.ಸಿ.ಸಿ ಯಲ್ಲಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಹೊಸ 75 ನೇತಾಜಿ ಅಮೃತ ಎನ್.ಸಿ.ಸಿ ಶಾಲೆಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಚಾಲನೆ, 75 ಪೈಲಟ್‍ಗಳ ತರಬೇತಿಗೆ ಚಾಲನೆ ಪಿ2006ಟಿ ವಿಮಾನ ಲೋಕಾರ್ಪಣೆ, ಹೆಲಿಟೂರಿಸಂ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

7500 new cadets to get opportunity in NCC Karnataka Chief Minister

ಎನ್.ಸಿ.ಸಿ ಸೇರುವ ಯುವಕರಲ್ಲಿ ಆಸಕ್ತಿ ಹೆಚ್ಚು ಮಾಡಿ ಯುವಕರನ್ನು ಉತ್ತೇಜಿಸಲು ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿಯೊಬ್ಬರಿಗೂ 12,000 ರೂ.ಗಳನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಭರಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಶಾಲೆಗಳಲ್ಲಿ 44,000 ಕೆಡೆಟ್‍ಗಳಿದ್ದು, ಎನ್.ಸಿ.ಸಿಯಲ್ಲಿ ಕಷ್ಟಕರವಾಗಿರುವ ಕಾರ್ಯಕ್ರಮವನ್ನು ಪುನರ್ ರಚಿಸಲು ರಕ್ಷಣಾ ಸಚಿವಾಲಯದ ಒಪ್ಪಿಗೆ ಪಡೆದು, ಅವರಿಗೆ ರಾಜ್ಯ ಸರ್ಕಾರ ಎನ್.ಸಿ.ಸಿ ಚಟುವಟಿಕೆಗಳಿಗೆ ಹಣದ ಸಂಪೂರ್ಣ ನೆರವು ನೀಡಲಾಗುವುದು. ಹಾಗೂ 44 ಸಾವಿರ ಘಟಕಗಳನ್ನು ಕಾಲೇಜುಗಳಿಗೆ ಸ್ಥಳಾಂತರ ಮಾಡಿ ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್‍ಗಳನ್ನು ಮುಂದಿನ ವರ್ಷ ಕಾಲೇಜಿಗಳಲ್ಲಿ ರೂಪಿಸುವ ಯೋಜನೆ ಇದೆ ಎಂದರು. ಇದಕ್ಕೆ ರಕ್ಷಣಾ ಸಚಿವಾಲಯದ ಅನುಮತಿ ಅಗತ್ಯವಿದ್ದು, ಅನುಮತಿ ದೊರೆಯುವ ವಿಶ್ವಾಸವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

bengaluru
7500 new cadets to get opportunity in NCC Karnataka Chief Minister

ಯುವಸಬಲೀಕರಣ ಇಲಾಖೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಯುವಕರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡುತ್ತಿದೆ. ಕ್ರೀಡೆ, ಸಾಹಸ, ಒಲಂಪಿಕ್ಸ್ ಗೆ ಸಿದ್ಧತೆ ಮಾಡಲು 4 ವರ್ಷಗಳ ಕಾಲ ದತ್ತು ಪಡೆಯುವ ಕಾರ್ಯಕ್ರಮವನ್ನು ಸ್ವಂತ ಶಕ್ತಿಯಿಂದ ಮಾಡಿರುವುದು ಶ್ಲಾಘನೀಯ ಎಂದರು.

ನಿಂತುಹೋಗಿದ್ದ ಸರ್ಕಾರಿ ಪ್ಲೈಯಿಂಗ್ ಶಾಲೆ ಪುನರಾರಂಭ ಮಾಡಿರುವುದು ಕಿರೀಟಪ್ರಾಯವಾಗಿದೆ. 100 ಜನರಿಗೆ ತರಬೇತಿ ನೀಡುವ ತೀರ್ಮಾನ ಮಾಡಲಾಗಿದ್ದು ಟ್ವಿನ್ ಇಂಜಿನ್ ವಿಮಾನವನ್ನೂ ಇಲ್ಲಿ ತರಲಾಗಿದೆ. ಪೂರ್ಣಚಾಲಿತ ರನ್‍ವೇ ಪ್ರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಸ್ಥಳದ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇದರೊಂದಿಗೆ ಮಹಿಳಾ ಸ್ವರಕ್ಷಣೆಗೆ ಪೊಲೀಸ್ ಇಲಾಖೆಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ರಕ್ಷಣೆಯಾಗಬೇಕು. ಮಹಿಳಾ ಸ್ವಯಂ ರಕ್ಷಣೆ ಶಾಲಾ ಕಾಜೇಜುಗಳಲ್ಲಿಯೂ ಹಮ್ಮಿಕೊಳ್ಳಬೇಕು. ಹೆಲಿಟೂರಿಸಂ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೇತಾಜಿಯವರ ಜನ್ಮದಿನದಂದು ಆಗುತ್ತಿದೆ. ಯುವಕರಿಗಾಗಿಯೇ ರೂಪಿಸಿರುವ ಕಾರ್ಯಕ್ರಮಗಳು ಇವು. ಇದು ಜ್ಞಾನದ ಶತಮಾನ ಅವಕಾಶಗಳ ಶತಮಾನವಾಗಿದ್ದು, ಅವುಗಳ ಉಪಯೋಗವನ್ನು ಪಡೆದು ಎಲ್ಲಾ ರಂಗಗಳಲ್ಲಿಯೂ ಮುಂದೆ ಬಂದಾಗ ಮಾತ್ರ ದೇಶ, ರಾಜ್ಯ ಮುಂದೆ ಬರುತ್ತದೆ ಎಂದರು.

7500 new cadets to get opportunity in NCC Karnataka Chief Minister

ನೇತಾಜಿಯವರು ಕೇವಲ 48 ವರ್ಷಗಳಲ್ಲಿ ಮಾಡಿರುವ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆ ನೀಡಲಿದೆ. ಅವರ ಆದರ್ಶಗಳನ್ನು ಪಾಲಿಸಿ ಮತ್ತೊಮ್ಮೆ ಭಾರತೀಯತೆಯ ಕಿಚ್ಚನ್ನು ಹತ್ತಿಸೋಣ ಎಂದರು.

ಕರ್ನಾಟಕದ ನಂಟು: ಕರ್ನಾಟಕಕ್ಕೂ, ನೇತಾಜಿ ಅವರಿಗೂ ದೊಡ್ಡ ನಂಟಿರುವುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಪಟ್ಟಾಭಿರಾಮ್ ರಡ್ಡಿಯವರಿಗೆ ಮಹಾತ್ಮಗಾಂಧಿಯವರು ಬೆಂಬಲ ನೀಡಿದಾಗ ಹಾವೇರಿಯ ಸಿದ್ದಪ್ಪ ಹೊಸಮನಿಯವರು ಬಾಂಬೆ ಪ್ರಾವಿನ್ಸ್‍ಗೆ ಕಾಂಗ್ರೆಸ್‍ನ ಪ್ರಮುಖ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬೆಂಬಲ ನೀಡಿದ್ದರು ಎಂದು ತಿಳಿಸಿದರು. ಹೊಸಮನಿಯವರು ಪತ್ರವನ್ನು ಕಂಡ ಕೂಡಲೇ ಧಾರವಾಡಕ್ಕೆ ನೇತಾಜಿಯವರು ಆಗಮಿಸಿದ್ದರು ಎನ್ನುವ ಪ್ರಸಂಗದ ಬಗ್ಗೆ ತಮ್ಮ ತಂದೆಯಿಂದ ತಿಳಿದುಕೊಂಡಿರುವುದಾಗಿ ತಿಳಿಸಿದರು.

ಜಪಾನಿನಲ್ಲಿ ನೇತಾಜಿಯವರಿಗೆ ಗೌರವ: ಜಪಾನಿನಲ್ಲಿರುವ ನೇತಾಜಿ ಅವರ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನ ಅವರಿಗೆ ಕೊಡುವ ಗೌರವ ನಮ್ಮ ಭಾರತಕ್ಕಿಂತ ಕಡಿಮೆ ಇರಲಿಲ್ಲ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಅವರ ಧೀರತನಕ್ಕೆ ಸ್ಪಷ್ಟವಾದ ಚಿಂತನೆ ಇತ್ತು. ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಅಂತಹವರನ್ನು ಸ್ವತಂತ್ರ ಹೋರಾಟದ ಪ್ರಮುಖರೆಂದು ಗುರುತಿಸಿದ್ದಿದ್ದರೆ, ಈ ದೇಶದ ಯುವಕರಲ್ಲಿ ದೇಶಭಕ್ತಿ ಪ್ರಬಲವಾಗಿ ಇರುತ್ತಿತ್ತು. ಈ ಮಹನೀಯರನ್ನು ಸ್ಮರಿಸಿಕೊಂಡು ಅವರ ಬದುಕಿನಿಂದ ಪ್ರೇರಣೆ ಪಡೆಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: `ಯುವಜನರಿಗೇ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು’

ಸಚಿವರಾದ ಡಾ:ಅಶ್ವತ್ಥ್ ನಾರಾಯಣ್, ಬಿ.ಸಿ.ನಾಗೇಶ್, ಶಾಸಕ ಕೃಷ್ಣಬೈರೇಗೌಡ, ವಿಧಾನಪರಿಷತ್ ಸದಸ್ಯ ಗೋವಿಂದ ರಾಜು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

bengaluru

LEAVE A REPLY

Please enter your comment!
Please enter your name here