Home ಶಿಕ್ಷಣ ಕಾಲೇಜು ಆರಂಭಕ್ಕೆ ಸಿದ್ಧತೆ: ವಿದ್ಯಾರ್ಥಿಗಳಿಗೆ ಲಸಿಕೀಕರಣ ಮುಗಿದ ನಂತರ ನಿರ್ಧಾರ ಎಂದ ಡಿಸಿಎಂ

ಕಾಲೇಜು ಆರಂಭಕ್ಕೆ ಸಿದ್ಧತೆ: ವಿದ್ಯಾರ್ಥಿಗಳಿಗೆ ಲಸಿಕೀಕರಣ ಮುಗಿದ ನಂತರ ನಿರ್ಧಾರ ಎಂದ ಡಿಸಿಎಂ

107
0

ಹುಬ್ಬಳ್ಳಿ:

ಉನ್ನತ ಶಿಕ್ಷಣ ವ್ಯಾಪ್ತಿಯ ಕಾಲೇಜುಗಳ ಆರಂಭಕ್ಕೆ ಸರಕಾರ ಇನ್ನೂ ಯಾವುದೇ ಚರ್ಚೆ ನಡೆಸಿಲ್ಲ. ಆದರೆ, ಭೌತಿಕ ತರಗತಿಗಳ ಆರಂಭಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗಾಗಲೇ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುವ ಕೆಲಸ ಭರದಿಂದ ಸಾಗುತ್ತಿದೆ. ಲಸಿಕೆ ಕಾರ್ಯ ಮುಗಿಯುತ್ತಿದ್ದಂತೆ ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕಾಲೇಜುಗಳನ್ನು ತೆರೆಯಲು ಸವಾಲುಗಳಿರುವುದು ನಿಜ. ಆದರೆ ಎಷ್ಟು ದಿನವೆಂದು ಹಾಗೇ ಇರಲು ಸಾಧ್ಯ? ಜೀವನ ಸಾಗುತ್ತಲೇ ಇರಬೇಕು. ಸುರಕ್ಷತೆಯ ಜತೆ ಜತೆಗೇ ಜೀವನ ಸಾಗುತ್ತಿರಬೇಕು. ಈ ನಿಟ್ಟಿನಲ್ಲಿ ಲಸಿಕೆ ಮಾತ್ರವೇ ಪರಿಹಾರ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಮೂರನೇ ಅಲೆ ತಡೆಗೆ ಸಿದ್ಧತೆ

ಸರಕಾರ ಎಲ್ಲೂ ಮೈಮರೆತಿಲ್ಲ. ಒಂದೆಡೆ ಲಸಿಕೀಕರಣದ ವೇಗ ಹೆಚ್ಚಿಸುತ್ತಲೇ ಇನ್ನೊಂದೆಡೆ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ರಾಜ್ಯಾದ್ಯಂತ ಕೋವಿಡ್‌ ಸೋಂಕಿತರಿಗಾಗಿಯೇ 6,000 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಪ್ರಮಾಣಲ್ಲಿ ವೈದ್ಯರು, ನರ್ಸುಗಳು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ಗ್ರೂಪ್‌ ಡಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 2,000 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು ಡಾ.ಅಶ್ವತ್ಥನಾರಾಯಣ.

ಜನಸಂಖ್ಯೆಯನ್ನು ತಡೆಯಬೇಕು

ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರದ ʼಇಬ್ಬರು ಮಕ್ಕಳ ನೀತಿʼಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಭಿವೃದ್ಧಿಗೆ ಪೂರಕವಾಗಿ ಜನಸಂಖ್ಯೆ ಪ್ರಮಾಣವನ್ನು ತಡೆಯಬೇಕಾಗಿದೆ. ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here