ಬೆಂಗಳೂರು:
ಅಂದಿನ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಎರಡು ಬಾರಿ ನಿರ್ದೇಶಕರಾಗಿ ಹಾಗೂ ಒಮ್ಮೆ ಆಯುಕ್ತರಾಗಿ ಸೇವೆ ಸಲ್ಲಿಸಿ, ಪೊಲೀಸ್ ಇಲಾಖೆಯ ಜೊತೆ ಜೊತೆಗೆ ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯ ಪ್ರೀತಿಗೆ ಪಾತ್ರರಾಗಿದ್ದ ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿ ಕೆ ವಿ ರವೀಂದ್ರನಾಥ ಠ್ಯಾಗೂರ್ ಅವರು ಇನ್ನಿಲ್ಲ.
ಕೋವಿಡ್-19 ಕ್ಕೆ ಚಿಕಿತ್ಸೆ ಪಡೆಯಲು ಹತ್ತು ದಿನಗಳ ಹಿಂದೆ ನಗರದ ಖಾಸಗಿ ಆಸ್ಪ್ತತ್ರೆಗೆ ದಾಖಲಾಗಿದ್ದ 72-ವರ್ಷದ ಠ್ಯಾಗೂರ್ ಅವರು ಇಂದು ಮಧ್ಯಾಹ್ನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಯೇ ಕೊನೆಯುಸಿರೆಳೆದರು. ಪತ್ನಿ ಭಾಗ್ಯ, ಪುತ್ರಿ ಅನುಲೇಖ ಹಾಗೂ ಪುತ್ರ ಅಭಿಷೇಕ್ ಮಾತ್ರವಲ್ಲದೆ, ಅಪಾರ ಬಂಧು-ಮಿತ್ರರನ್ನು ಠ್ಯಾಗೂರ್ ಅವರು ಅಗಲಿದ್ದಾರೆ.
ತಾವು ಹಿರಿಯ ಐ ಪಿ ಎಸ್ ಅಧಿಕಾರಿ ಎಂದು ಎಂದೂ ಬೀಗದೆ, ನೆರವು ಕೋರೊ ಬಂದ ಹಲವರಿಗೆ ಶಕ್ತಿ ಮೀರಿ ಸಹಾಯ ಮಾಡಿದ ಠ್ಯಾಗೂರ್ ಅವರು ಸಮಾಜದಲ್ಲಿ, ವಿಶೇಷವಾಗಿ ಮಾಧ್ಯಮ ಲೋಕದಲ್ಲೂ, ಮನ್ನಣೆ ಗಳಿಸಿದ್ದರು. ಸದಾ ನಗುಮೊಗ ಹೊತ್ತು ತಿರುಗುತ್ತಿದ್ದ ಠ್ಯಾಗೂರ್ ಅವರಲ್ಲಿ ವಿಶೇಷ ಹಾಸ್ಯ ಪ್ರಜ್ಞೆಯೂ ಮನೆ ಮಾಡಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದ ಉದ್ಘಾಟನಾ ಸಮಾರಂಭಕ್ಕೆ ಹಿಂದೂ, ಮುಸಲ್ಮಾನ, ಕ್ರೈಸ್ತ ಹಾಗೂ ಸಿಖ್ ಸಮುದಾಯದ ಧರ್ಮ ಗುರುಗಳನ್ನು ಆಮಂತ್ರಿಸಿ ಪ್ರಾರ್ಥನೆ ಸಲ್ಲಿಸಲು ವ್ಯವಸ್ಥೆ ಮಾಡಿದ್ದು ಠ್ಯಾಗೂರ್ ಅವರ ಸಾಧನೆ. ಸರ್ಕಾರಿ ಕಚೇರಿಗಳು ಎಲ್ಲರ ಸೊತ್ತು ಎಂದು ಬಣ್ಣಿಸಿದ್ದ ಠ್ಯಾಗೂರ್ ಅವರ ಉದಾರ ಮತ್ತು ಉದಾತ್ತ ಮನೋಭಾನ ಇನ್ನು ನೆನಪು ಮಾತ್ರ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ ಎಸ್ ಹರ್ಷ ಅವರೂ ಒಳಗೊಂಡಂತೆ ಇಡೀ ಇಲಾಖೆಯೇ ಕೆ ವಿ ಆರ್ ಠ್ಯಾಗೂರ್ ಅವರ ನಿಧನಕ್ಕೆ ಕಂಬನಿ ಮಿಡಿದಿದೆ.